ಬಿಬಿಎಂಪಿ ಜಾಹೀರಾತು ಹಗರಣ: ಸಿಬಿಐ ತನಿಖೆಗೆ ಮಥಾಯಿ ಒತ್ತಾಯ

ಬಿಬಿಎಂಪಿಗೆ ಕಳೆದ ಎಂಟು ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ಆದಾಯ ನಷ್ಟವಾಗಿದ್ದು, ಈ ಅಕ್ರಮ ಜಾಹೀರಾತು ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು...
ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ
ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ
Updated on

ಬೆಂಗಳೂರು: ಬಿಬಿಎಂಪಿಗೆ ಕಳೆದ ಎಂಟು ವರ್ಷಗಳಲ್ಲಿ ಸುಮಾರು  2 ಸಾವಿರ ಕೋಟಿ ಆದಾಯ ನಷ್ಟವಾಗಿದ್ದು, ಈ ಅಕ್ರಮ ಜಾಹೀರಾತು ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕೆಂದು   ಬಿಬಿಎಂಪಿ ಸಹಾಯಕ ಆಯುಕ್ತ ಕೆ.ಮಥಾಯಿ ಒತ್ತಾಯಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಜಾಹೀರಾತು ಮೂಲದಿಂದ ವರಮಾನ ಸೋರಿಕೆಯಾಗಲು ಹಿರಿಯ ಅಧಿಕಾರಿಗಳು ಕೈಗೊಂಡ ಕೆಲವು ಪ್ರಶ್ನಾರ್ಹವಾದ ನಿರ್ಧಾರಗಳು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಮಥಾಯಿ ಅವರು ತಮ್ಮ ಮೊದಲ ವರದಿಯಲ್ಲಿ ತಿಳಿಸಿದ್ದರು.

ಜಾಹೀರಾತು ವರಮಾನ ಸೋರಿಕೆಗೆ ಸಂಬಂಧಿಸಿದಂತೆ ಮಥಾಯಿ ಅವರು ಬಿಬಿಎಂಪಿ ಆಯುಕ್ತ ಜಿ.ಕುಮಾರ್‌ ನಾಯಕ್‌ ಅವರಿಗೆ ಎಂಟನೇ ವರದಿ ನೀಡಿದ್ದಾರೆ. ಅದರ ಪ್ರತಿಯನ್ನು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೂ ಹಸ್ತಾಂತರಿಸಿದ್ದಾರೆ.

ನಂತರ ನೀಡಿದ ಆರು ವರದಿಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸೆರೆ ಹಿಡಿದ ದೃಶ್ಯಾವಳಿ ಸಂರಕ್ಷಣೆ, ವಾರ್ಷಿಕ ರು. 300 ಕೋಟಿಯಷ್ಟು ಜಾಹೀರಾತು ಶುಲ್ಕ ಸಂಗ್ರಹದ ಅವಕಾಶ, ಎಂಜಿನಿಯರ್‌ಗಳ ಕರ್ತವ್ಯ ಲೋಪ, ಶಾಂತಲಾ ವಾರ್ಡ್‌ನಲ್ಲಿ ಜಾಹೀರಾತು ಶುಲ್ಕ ಸಂಗ್ರಹ, ಮೇಲಧಿಕಾರಿಗಳಿಗೆ ಸಲ್ಲಿಸಬೇಕಿದ್ದ ಕಡತ ಬಚ್ಚಿಟ್ಟ ಪ್ರಕರಣಗಳ ಕುರಿತು ಪ್ರಸ್ತಾಪಿಸಿದ್ದರು.


ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಬಿಬಿಎಂಪಿ ಹಿಂದಿನ ಆಯುಕ್ತ ಎಂ.ಲಕ್ಷ್ಮೀನಾರಾಯಣ, ಹಿಂದಿನ ಹೆಚ್ಚುವರಿ ಆಯುಕ್ತ ಎನ್‌.ವಿ. ಪ್ರಸಾದ್‌ ಹಾಗೂ ಹಾಲಿ ಹೆಚ್ಚುವರಿ ಆಯುಕ್ತೆ ವಿ.ರಶ್ಮಿ ಅವರು ಕೈಗೊಂಡ ಕೆಲವು ನಿರ್ಧಾರಗಳು ಜಾಹೀರಾತು ಮಾಫಿಯಾಕ್ಕೆ ಅನುಕೂಲ ಮಾಡಿಕೊಟ್ಟಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಜಾಹೀರಾತು ವರಮಾನ ಸೋರಿಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರು (ಮಥಾಯಿ) ತಪಾಸಣೆ ನಡೆಸಿ ನೀಡಿದ ವರದಿಗೆ ಮುಖ್ಯಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಹಾಯಕ ಆಯುಕ್ತರನ್ನೇ ತೆರಿಗೆ ವಸೂಲಿಗೆ ಮುಖ್ಯಸ್ಥನನ್ನಾಗಿ ಮಾಡಬೇಕು ಎಂಬ ಸೂಚನೆ ನೀಡಿದ್ದರು. ಆದರೆ, ಮುಖರ್ಜಿ ಅವರು ‘ಭ್ರಷ್ಟಾಚಾರ ಬಯಲಿಗೆ ಎಳೆಯುವವರು ಹೊರಹೋಗಬೇಕು’ ಎಂದು ನೇರವಾಗಿಯೇ ಬೆದರಿಕೆ ಒಡ್ಡಿದ್ದರು’ ಎಂದು ವಿವರಿಸಲಾಗಿದೆ.

ನಿಯಮಾವಳಿ ಅನುಮತಿಸುವ ಪ್ರಮಾಣಕ್ಕಿಂತ ಹೆಚ್ಚಿನ ಅಳತೆಯ ಜಾಹೀರಾತು ಫಲಕಗಳನ್ನು ಅಧಿಕೃತಗೊಳಿಸಲು ಕೆಲವರು ಗೌಪ್ಯವಾಗಿ ಯತ್ನಿಸಿದ್ದರು’ ಎಂದು ತಿಳಿಸಲಾಗಿದೆ. ‘ನಿಯಮಾವಳಿ ಅನುಮತಿಸುವ ಪ್ರಮಾಣಕ್ಕಿಂತ ಅಧಿಕ ಅಳತೆಯ ಫಲಕಗಳಿಗೆ ಸಂಬಂಧಿಸಿದ ಕಡತ ಸಲ್ಲಿಸಿ ಹಲವು ತಿಂಗಳಾದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ನಿಯಮಬಾಹಿರವಾದ ಫಲಕಗಳಿಗೆ ಅನುಮತಿ ನೀಡಿದರೆ ಬಿಬಿಎಂಪಿಗೆ ನಷ್ಟ ಉಂಟಾಗಲಿದೆ. ಅಲ್ಲದೆ, ಕೋರ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚಲಿದೆ. ಎಲ್ಲ ಮಾಹಿತಿಯನ್ನು ಗಮನಕ್ಕೆ ತಂದರೂ ಕಡತ ವಿಲೇವಾರಿ ಮಾಡಿಲ್ಲ’ ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com