ಬೆಂಗಳೂರು: ಮಣಿಪುರದ ಮೂಲದ ಯುವತಿಯ ಅಪಹರಣ ಮತ್ತು ಅತ್ಯಾಚಾರ ಯತ್ನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸದಾಶಿವಯ್ಯ ಮತ್ತು ಮುಖ್ಯ ಪೇದೆ ರಾಮಚಂದ್ರ ಅವರನ್ನು ಅಮಾನತುಗೊಳಿಸಿದ ಆದೇಶವನ್ನು ನಗರ ಆಯುಕ್ತ ಎನ್ ಎಸ್ ಮೆಘರಿಕ್ ಜಾರಿಗೊಳಿಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ ಅವರು ಪೊಲೀಸ್ ಅಧಿಕಾರಿಗಳಿಗೆ ಪ್ರಕರಣ ಸಂಬಂಧ ಸೂಕ್ತ ತನಿಖೆ ಕೈಗೊಂಡು, ಕರ್ತವ್ಯಲೋಪ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದ ಬೆನ್ನಲ್ಲೆ, ಕರ್ತ್ಯವ್ಯ ಲೋಪ ಎಸಗಿದ ಆರೋಪದ ಈ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಏ.23ರಂದು ಕತ್ರಿಗುಪ್ಪೆಯ ಮಾರಮ್ಮ ದೇವಸ್ಥಾನದ ಬಳಿಯಿರುವ ಪಿಜಿ ಬಳಿ ಮಣಿಪುರ ಮೂಲದ ಯುವತಿ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಆಕೆಯನ್ನು ಎತ್ತುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಈ ಬಗ್ಗೆ ಗೃಹ ಸಚಿವರು ತನಿಖೆ ಆದೇಶಿದ್ದರು. ತನಿಖೆಯಲ್ಲಿ ಮೇಲ್ನೋಟಕ್ಕೆ ಈ ಇಬ್ಬರು ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆಂದು ತಿಳಿದು ಬಂದಿದ್ದು, ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.