ಮಾಧ್ಯಮಗಳಿಂದ ಸುಳ್ಳು ಸುದ್ದಿ; ಬಲಿ ನಡೆದಿಲ್ಲ ಎಂದ ಡಾ.ಸನತ್‌ಕುಮಾರ್

ಕುರಿ-ಕೋಳಿ ಬಲಿ ವಿಚಾರವಾಗಿ ಇಡೀ ರಾಜ್ಯದ ಗಮನ ಸೆಳೆದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದ ಸೋಮಯಾಗದಲ್ಲಿ ಯಾವುದೇ ಬಲಿ ನಡೆದಿಲ್ಲ. ಕೇವಲ ಪೂಜೆ ಮಾತ್ರ ನಡೆದಿದೆ...
ಮತ್ತೂರಿನಲ್ಲಿ ನಡೆದ ಸೋಮಯಾಗ
ಮತ್ತೂರಿನಲ್ಲಿ ನಡೆದ ಸೋಮಯಾಗ
Updated on

ಶಿವಮೊಗ್ಗ: ಕುರಿ-ಕೋಳಿ ಬಲಿ ವಿಚಾರವಾಗಿ ಇಡೀ ರಾಜ್ಯದ ಗಮನ ಸೆಳೆದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದ ಸೋಮಯಾಗದಲ್ಲಿ ಯಾವುದೇ ಬಲಿ ನಡೆದಿಲ್ಲ. ಕೇವಲ ಪೂಜೆ ಮಾತ್ರ  ನಡೆದಿದೆ ಎಂದು ಯಾಗದ ಆಯೋಜಕ ಡಾ.ಸನತ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಸ್ಕೃತ ವಿದ್ವಾಂಸ ಮತ್ತೂರಿನ ಡಾ.ಸನತ್‌ಕುಮಾರ್ ಅವರು, ಆರೋಪವನ್ನು ತಳ್ಳಿಹಾಕಿದ್ದಾರೆ. ಸೋಮಯಾಗದಲ್ಲಿ ಆಡುಗಳನ್ನು ಆಹುತಿ  ನೀಡಲಾಗಿದೆ ಎನ್ನಲಾದ ವಿಚಾರ ಸತ್ಯಕ್ಕೆ ದೂರವಾಗಿದ್ದು, ಅಲ್ಲಿ ಯಾವುದೇ ರೀತಿಯ ಕುರಿ-ಕೋಳಿ ಬಲಿ ನಡೆದಿಲ್ಲ. ಸನಾತನ ಧರ್ಮದಂತೆ ವಿಧಿವತ್ತಾಗಿ ಯಾಗ ಮಾಡಿದ್ದೇವೆ ಎಂದು ಹೇಳಿದ್ದಾರೆ.

"ಲೋಕ ಕಲ್ಯಾಣಾರ್ಥವಾಗಿ ನಾವು ಯಾಗ ಆಯೋಜಿಸಿದ್ದು, ಶಾಂತಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದೆವು. ಯಾಗ ಕುಂಡದ ಸಮೀಪ ಯೂಪಸ್ತಂಭದಲ್ಲಿ ಆಡು, ಹಸುಗಳನ್ನು ಕಟ್ಟಿದ್ದೆವು.  ಯಾಗದ ವೇಳೆ ಅವುಗಳನ್ನು ಪೂಜಿಸಿದ್ದೇವೆಯೇ ಹೊರತು ಬಲಿ ನೀಡಿಲ್ಲ. ಆರು ದಿನ ಉಪವಾಸ ಹಾಗೂ ಮೌನವ್ರತದಲ್ಲಿದ್ದು, ಈ ಯಾಗವನ್ನು ಮಾಡಿದ್ದೇನೆ" ಎಂದು ಸನತ್ ಕುಮಾರ್  ಹೇಳಿದರು.

ಮಾಧ್ಯಮಗಳ ವರದಿ ಕುರಿತಂತೆ ಕಿಡಿಕಾರಿದ ಸನತ್ ಕುಮಾರ್ ಅವರು, ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಸುಳ್ಳು ವಿಚಾರಗಳನ್ನು ಬಿಂಬಿಸಲಾಗುತ್ತಿದ್ದು, ಯಾಗ ಮಾಡಬರಾದು ಎಂದು  ಸಂವಿಧಾನದಲ್ಲಿದೆಯೇ? ಶಾಸ್ತ್ರಗಳಲ್ಲಿರುವಂತೆ ಯಾಗವನ್ನು ನಡೆಸಿಕೊಡಲಾಗಿದ್ದು, ಬ್ರಾಹ್ಮಣರು ಮದ್ಯ ಸೇವನೆ ಮತ್ತು ಮಾಂಸಾಹಾರ ಭಕ್ಷಣೆ ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ. ಒಳ್ಳೆಯ  ಉದ್ದೇಶದಿಂದ ನಾವು ಯಾಗವನ್ನು ಮಾಡಿದ್ದೇವೆ. ನಮ್ಮನ್ನು ಸುಖಾಸುಮ್ಮನೆ ಟೀಕೆ ಮಾಡುತ್ತಿರುವ ಮಂದಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಸನತ್ ಕುಮಾರ್ ಭಾವೋದ್ವೇಗದಿಂದ  ಹೇಳಿದರು.

ಮೂಲಗಳ ಪ್ರಕಾರ ಕಳೆದ ಏಪ್ರಿಲ್ 22ರಿಂದ 27ರವರೆಗೆ ಶಿವಮೊಗ್ಗದ ಮತ್ತೂರು ಗ್ರಾಮದಲ್ಲಿ ಸಂಕೇತಿ ಬ್ರಾಹ್ಮಣ ಸಮುದಾಯದ ನೇತೃತ್ವದಲ್ಲಿ ಸೋಮಯಾಗ ಆಯೋಜನೆ ಮಾಡಲಾಗಿತ್ತು. ಯಾಗದಲ್ಲಿ 8 ಕುರಿಗಳನ್ನು ಬಲಿ ಕೊಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಬಲಿ ನೀಡುವ ವೇಳೆ ಶಬ್ದಬಾರದಂತೆ ಕುರಿಗಳ ಬಾಯಿ ಕಟ್ಟಿ ಅವುಗಳನ್ನು ಬಲಿ ಕೊಡಲಾಗಿದೆ. ಬಳಿಕ ಯಾಗ ನಡೆಸಿಕೊಟ್ಟ ಬ್ರಾಹ್ಮಣರೇ ಅದನ್ನು ಭಕ್ಷಣೆ ಮಾಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ. ಸೋಮಯಾಗದಲ್ಲಿ ಗೋಕರ್ಣ, ತಿರುಪತಿ ಹಾಗೂ ಚೆನ್ನೈನಿಂದ ಬಂದ 17 ಋತ್ವಿಜರು ಭಾಗವಹಿಸಿದ್ದರು. ಯಾಗಕ್ಕೆ 15 ಲಕ್ಷ ರು. ಖರ್ಚಾಗಿದೆ. 15 ವರ್ಷಗಳಲ್ಲಿ ಮತ್ತೂರಿನಲ್ಲಿ ನಡೆದ ಮೂರನೇ ಸೋಮಯಾಗ ಇದಾಗಿದೆ ಎಂಜು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com