ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಹಕ್ಕಿ ಜ್ವರ; ಬೀದರ್ ನಲ್ಲಿ ರೋಗಪತ್ತೆ

ಅಪಾಯಕಾರಿ ಹಕ್ಕಿ ಜ್ವರ ಮತ್ತೆ ರಾಜ್ಯಕ್ಕೆ ವಕ್ಕರಿಸಿದ್ದು, ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ...
ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಹಕ್ಕಿ ಜ್ವರ (ಸಂಗ್ರಹ ಚಿತ್ರ)
ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಹಕ್ಕಿ ಜ್ವರ (ಸಂಗ್ರಹ ಚಿತ್ರ)

ಬೀದರ್: ಅಪಾಯಕಾರಿ ಹಕ್ಕಿ ಜ್ವರ ಮತ್ತೆ ರಾಜ್ಯಕ್ಕೆ ವಕ್ಕರಿಸಿದ್ದು, ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ.

ಹುಮ್ನಾಬಾದ್ ನ ಸ್ಥಳೀಯ ಕೋಳಿ ಫಾರಂನಲ್ಲಿ ಜ್ವರದ ಲಕ್ಷಣಗಳು ಪತ್ತೆಯಾಗಿದ್ದು, ನೆರೆಯ ತೆಲಂಗಾಣ ರಾಜ್ಯದಿಂದ ಹಕ್ಕಿ ಜ್ವರದ ಸೋಂಕು ರಾಜ್ಯಕ್ಕೆ ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ.  ಇನ್ನು ಸೋಂಕು ಪತ್ತೆಯಾದ ಸ್ಥಳಕ್ಕೆ ವೈದ್ಯಕೀಯ ನುರಿತ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು, ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೂಡ  ನೀಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಬೀದರ್ ನಲ್ಲಿ ಹಕ್ಕಿ ಜ್ವರ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು ಅವರು, ಇಂದು ಸಂಜೆ ತುರ್ತು ಉನ್ನತ ಮಟ್ಟದ ಸಭೆ ನಡೆಸಿದ್ದು. ಸಭೆಯಲ್ಲಿ  ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶು ವಿವಿಯ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಸೋಂಕು ಇತರೆಡೆಗೆ  ಹರಡದಂತೆ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ರೋಗ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಎಲ್ಲಾ ರೀತಿಯ   ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸೋಂಕು  ಕಾಣಿಸಿ ಕೊಂಡಿರುವ ಸುತ್ತಮುತ್ತಲಿನ ಪ್ರದೇಶದ ಕೋಳಿಗಳನ್ನು ವೈಜ್ಞಾನಿಕ ವಿಧಾನದಲ್ಲಿ  ನಾಶ ಪಡಿಸಲು ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ಸೊಂಕು ಪೀಡಿತ ಪ್ರದೇಶದಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿ ಸಾಕಾಣಿಕಾ ಕೇಂದ್ರಗಳು, ಜನ-ಜಾನುವಾರುಗಳ ಬಗ್ಗೆಯೂ ಕೂಡ ಕಟ್ಟೆಚ್ಚರ ವಹಿಸುವಂತೆ ಸಚಿವರು  ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇವಿಷ್ಟೇ ಅಲ್ಲದೆ ನೆರೆಯ ತೆಲಂಗಾಣದಿಂದ ಕೋಳಿಗಳನ್ನು ರಾಜ್ಯಕ್ಕೆ ತರುವುದಕ್ಕೆ ನಿರ್ಬಂಧ ಹೇರುವ ಕುರಿತು ಚಿಂತನೆ ನಡೆಸಲಾಗಿದೆ.  ಜೊತೆಗೆ ಸೋಂಕು ಪೀಡಿತ ಪ್ರದೇಶದಿಂದ ಯಾವುದೇ ಕೋಳಿಗಳನ್ನು ಹೊರ ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಗಡಿ ಭಾಗದ ಜಿಲ್ಲೆಗಳಲ್ಲೂ ಹಕ್ಕಿ ಜ್ವರದ ಸೋಂಕಿನ  ಬಗ್ಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಸೂಚನೆ ನೀಡಲಿದೆ.

 ಅಲ್ಲದೆ, ಆರೋಗ್ಯ ಇಲಾಖೆಗೂ ಕೂಡ ಈ ಬಗ್ಗೆ ನಿರ್ದೇಶನ ನೀಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದ ಇತರೆ ಭಾಗಗಳಲ್ಲೂ ಕೂಡ  ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ದೇಶಿಸಲಾಗಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಕೈಗೊಂಡು ರೋಗ ಹರಡದಂತೆ ತಡೆಯಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com