ಜೆಸಿಬಿ ಕೊರತೆ: ಸೋಂಕು ಪೀಡಿತ ಕೋಳಿ ನಾಶ ಮುಂದೂಡಿಕೆ

ಬೀದರ್ ಜಿಲ್ಲೆಯ ಹುಮ್ನಾಬಾದ್ ನ ಕೋಳಿ ಫಾರಂ ನ ಹಕ್ಕಿ ಜ್ವರ ಪೀಡಿತ ಸುಮಾರು 1.5 ಲಕ್ಷ ಕೋಳಿಗಳನ್ನು ನಾಶಪಡಿಸುವ ಕಾರ್ಯ ಮುಂದೂಡಲಾಗಿದ್ದು, ಜೆಸಿಬಿಗಳ ಕೊರತೆ ಮತ್ತು ಮಳೆಯಿಂದಾಗಿ ಕೋಳಿಗಳ ನಾಶ ಪ್ರಕ್ರಿಯೆನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಬೀದರ್ ಜಿಲ್ಲೆಯ ಸೋಂಕಿ ಪೀಡಿತ ಕೋಳಿ ಫಾರಂ (ಸಂಗ್ರಹ ಚಿತ್ರ)
ಬೀದರ್ ಜಿಲ್ಲೆಯ ಸೋಂಕಿ ಪೀಡಿತ ಕೋಳಿ ಫಾರಂ (ಸಂಗ್ರಹ ಚಿತ್ರ)
Updated on

ಬೀದರ್: ಬೀದರ್ ಜಿಲ್ಲೆಯ ಹುಮ್ನಾಬಾದ್ ನ ಕೋಳಿ ಫಾರಂ ನ ಹಕ್ಕಿ ಜ್ವರ ಪೀಡಿತ ಸುಮಾರು 1.5 ಲಕ್ಷ ಕೋಳಿಗಳನ್ನು ನಾಶಪಡಿಸುವ ಕಾರ್ಯ ಮುಂದೂಡಲಾಗಿದ್ದು, ಜೆಸಿಬಿಗಳ ಕೊರತೆ ಮತ್ತು  ಮಳೆಯಿಂದಾಗಿ ಕೋಳಿಗಳ ನಾಶ ಪ್ರಕ್ರಿಯೆನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಮಾರಕ ಕಾಯಿಲೆ ಹಕ್ಕಿ ಜ್ವರ ಹರಡಿರುವ ಬೀದರ್‌ ಜಿಲ್ಲೆ ಹುಮ್ನಾಬಾದ್‌ ತಾಲೂಕಿನ ಮೊಳಕೇರಾ ಗ್ರಾಮದದ ಕೋಳಿ ಸಾಕಾಣಿಕೆ ಕೇಂದ್ರದಲ್ಲಿರುವ ಸೋಂಕಿತ ಕೋಳಿಗಳನ್ನು ನಾಶಪಡಿಸಲು  ಕೇಂದ್ರ ಮತ್ತು ರಾಜ್ಯದ ವಿಶೇಷ ತಂಡ ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಜೆಸಿಬಿಗಳ ಸಹಾಯದಿಂದ ದೊಡ್ಡ ಗಾತ್ರದ ಗುಂಡಿ ತೋಡಿ ಅಲ್ಲಿ ವೈಜ್ಞಾನಿಕವಾಗಿ ಕೋಳಿಗಳನ್ನು ನಾಶಪಡಿಸಲು  ನಿರ್ಧರಿಸಲಾಗಿತ್ತು. ವೈರಸ್‌ ಪತ್ತೆಯಾದ ಕಾರಣ ಮೊಳಕೇರಾ ಬಳಿಯ ರಮೇಶ್‌ ಗುಪ್ತಾ ಎಂಬುವರಿಗೆ ಸೇರಿದ ಅರುಣೋದಯ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತಜ್ಞ ಅಧಿಕಾರಿಗಳ ತಂಡ  ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದು, ಸುಮಾರು 1.30 ಲಕ್ಷ ಕೋಳಿಗಳನ್ನು ಹೂಳುವ ನಿರ್ಣಯವನ್ನು ಕೈಗೊಂಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಜೆಸಿಬಿಗಳು ಸಿಗದ ಹಿನ್ನಲೆಯಲ್ಲಿ  ಕೋಳಿಗಳನ್ನು ಹೂಳುವ ಕಾರ್ಯಾಚರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಕಾರ್ಯಾಚರಣೆಗೆ ಸುಮಾರು 50 ಲಕ್ಷ ರು. ವೆಚ್ಚವಾಗುವ ಅಂದಾಜು ಮಾಡಲಾಗಿದ್ದು, ಈಗಾಗಲೇ ಜಿಲ್ಲಾಡಳಿತದಿಂದ 10 ಲಕ್ಷ ರು. ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ. ಕೋಳಿಗಳನ್ನು  ಹೂಳಲು 50 ತಂಡ ರಚಿಸಲಾಗಿದ್ದು, ಒಂದು ತಂಡದಲ್ಲಿ ಓರ್ವ ವೈದ್ಯ ಹಾಗೂ ನಾಲ್ವರು ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಇರಲಿದ್ದಾರೆ. ಪ್ರತಿ ತಂಡಕ್ಕೆ 2800 ಕೋಳಿ ಕೊಲ್ಲುವ ಗುರಿ  ನಿಗದಿಪಡಿಸಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರ ಒಟ್ಟು 14 ಎಕರೆ ಭೂಮಿ ಹೊಂದಿದ್ದು, ಅಲ್ಲಿ ತಲಾ ಆರು ಅಡಿ ಉದ್ದ, ಅಗಲ ಮತ್ತು ಆಳದ ಅಂದಾಜು 200 ಗುಂಡಿ ತೋಡಲು ಯೋಜಿಸಲಾಗಿದೆ  ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋಳಿ ಗುಂಡಿಗೆ ಕಣ್ಗಾವಲು
ಇನ್ನು ಗುಂಡಿಯಲ್ಲಿ ಹೂಳುವ ಜಾಗಕ್ಕೆ ಕಣ್ಗಾವಲು ಹಾಕಲಾಗುತ್ತಿದ್ದು, ಸುಮಾರು ಮೂರು ತಿಂಗಳ ಕಾಲ ಈ ಪ್ರದೇಶದಲ್ಲಿ ನಿಗಾ ವಹಿಸಲಾಗುವುದು. ಸೋಂಕು ಹರಡುವುದಿಲ್ಲ ಎಂಬುದು  ಖಚಿತವಾದ ಬಳಿಕವಷ್ಟೇ ಕೋಳಿ ಸಾಗಾಣಿಕೆ ಕೇಂದ್ರ ಮೊದಲಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಲು ತಿಳಿಸಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ  ಮೊಳಕೇರಾ ಸಾಕಾಣಿಕ ಕೇಂದ್ರದ ಮೂರು ಕಿ.ಮೀ. ವ್ಯಾಪ್ತಿಯಲ್ಲಿರುವ  ಕೋಳಿಗಳ ಮೇಲೂ ನಿಗಾ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ರೋಗ ಲಕ್ಷಣಗಳು ಕಂಡು ಬಂದ  ತಕ್ಷಣ ತಪಾಸಣೆ ನಡೆಸಲು ತುರ್ತು ತಂಡ ಸಿದ್ಧಪಡಿಸಿಕೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ.

ಕೇಂದ್ರದ ತಂಡ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕೋಳಿ ಸಾಕಾಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿತು. ನಂತರ ಪಶು ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿ  ಕಾರ್ಯಾಚರಣೆ ಮಾರ್ಗಸೂಚಿ ಸಿದ್ದಪಡಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com