ರಾಗಿ ಮುದ್ದೆಗೂ ಬಂತು ಇನ್ಸ್ ಟಂಟ್ ಮಿಕ್ಸ್!

ರಾಗಿ ಮುದ್ದೆ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ನೂಡಲ್ಸ್, ಪಾಸ್ತಾದಂತಹ ರೆಡಿಮೇಡ್ ತಿನಿಸುಗಳ ಪಟ್ಟಿಗೆ ಇದೀಗ ಕರ್ನಾಟಕದ ಸಾಂಪ್ರದಾಯಿಕ ತಿನಿಸು ರಾಗಿ ಮುದ್ದೆ ಕೂಡ ಸೇರಲಿದೆ...
ರಾಗಿ ಮುದ್ದೆ (ಸಂಗ್ರಹ ಚಿತ್ರ)
ರಾಗಿ ಮುದ್ದೆ (ಸಂಗ್ರಹ ಚಿತ್ರ)

ಮೈಸೂರು: ರಾಗಿ ಮುದ್ದೆ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ನೂಡಲ್ಸ್, ಪಾಸ್ತಾದಂತಹ ರೆಡಿಮೇಡ್ ತಿನಿಸುಗಳ ಪಟ್ಟಿಗೆ ಇದೀಗ ಕರ್ನಾಟಕದ ಸಾಂಪ್ರದಾಯಿಕ ತಿನಿಸು ರಾಗಿ ಮುದ್ದೆ ಕೂಡ  ಸೇರಲಿದೆ. ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory-DFRL) ರಾಗಿ ಮುದ್ದೆ ಇನ್ಸ್ ಟಂಟ್ ಮಿಕ್ಸ್ ತಯಾರು  ಮಾಡಿದೆ.

ರಾಗಿ ಮುದ್ದೆ ನಾಟಿ ಕೋಳಿ ಸಾರು..ಅಹಾ ಎಂಥಾ ಕಾಂಬಿನೇಷನ್..ಎಂತಹ ಮಂದಿಗಾದರೂ ಈ ತಿನಿಸು ಬಾಯಲ್ಲಿ ನೀರೂರಿಸುತ್ತದೆ. ಆದರೆ ರಾಗಿ ಮುದ್ದೆ ಮಾಡುವ ವಿಧಾನ ಬಾರದೇ ಅದೆಷ್ಟೋ ಮಂದಿ ಈ ಸಾಂಪ್ರದಾಯಿಕ ತಿನಿಸಿಂದ ದೂರ ಇರುತ್ತಾರೆ. ಎಲ್ಲೋ ಸ್ನೇಹಿತರೋ-ಬಂಧುಗಳೋ ಕರೆದ ವಿಶೇಷ ಔತಣಕೂಟದಲ್ಲೋ, ಅಥವಾ ಕಾರ್ಯಕ್ರಮದಲ್ಲೋ ಈ ರಾಗಿಮುದ್ದೆಯನ್ನು  ತಿಂದು ತೃಪ್ತರಾಗುತ್ತಾರೆ. ಆದರೆ ಇನ್ನು ಮುಂದೆ ರಾಗಿ ಮುದ್ದೆ ಪ್ರಿಯರು ಮುದ್ದೆಗಾಗಿ ಔತಣಕೂಟದವರೆಗೂ ಕಾಯುವ ಅಗತ್ಯವಿಲ್ಲ. ನಿಮಗೆ ಬೇಕೆಂದಾಗ ನೀವೇ ಕ್ಷಣಾರ್ಧಲ್ಲಿ ರಾಗಿ ಮುದ್ದೆ  ತಯಾರಿಸಿ ಸೇವಿಸಬಹುದಾಗಿದೆ. ಇದಕ್ಕೆ ಇನ್ನುಮುಂದೆ ಮಾರುಕಟ್ಟೆಯಲ್ಲಿ ರಾಗಿಮುದ್ದೆ ಇನ್ಸ್ ಟಂಟ್ ಮಿಕ್ಸ್ ದೊರೆಯಲಿದೆ.

ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಇಂತಹುದೊಂದು ವಿನೂತ ಪ್ರಯೋಗಕ್ಕೆ ಕೈ ಹಾಕಿದ್ದು, ನೂಡಡಲ್ಸ್, ಪಾಸ್ತಾಗಳಂತೆ ರಾಗಿಮುದ್ದೆಗೆ ಕೂಡ ಇನ್ಸ್ ಟಂಟ್ ಮಿಕ್ಸ್  ತಯಾರಿಸಿದೆ. ಡಿಆರ್ ಎಫ್ ಎಲ್ ನಲ್ಲಿರುವ ಆಹಾರ ಸಂಶೋಧಕರು ರಾಗಿಮುದ್ದೆ ತಯಾರಿಸುವ ಇಡೀ ಪ್ರಕ್ರಿಯೆಯನ್ನು ತಮ್ಮ ಸಂಶೋಧನೆ ಮೂಲಕ ಸರಳೀಕರಣಗೊಳಿಸಿದ್ದು, ಒಲೆಯ  ಅವಶ್ಯಕತೆಯೇ ಇಲ್ಲದೇ ಕೆಲವೇ ನಿಮಿಷಗಳಲ್ಲಿ ರಾಗಿಮುದ್ದೆಯನ್ನು ತಯಾರಿಸಬಹುದಾಗಿದೆ. ಡಿಆರ್ ಎಫ್ ಎಲ್ ಸಂಸ್ಥೆ ಹೊರತಂದಿರುವ ಈ ರಾಗಿ ಮುದ್ದೆ ಮಿಕ್ಸ್ ಅನ್ನು 1:2 ಅನುಪಾತದಲ್ಲಿ ಬಿಸಿ  ನೀರಿಗೆ ಹಾಕಿ ಮಿಕ್ಸ್ ಮಾಡಿ ಮುದ್ದೆ ಕಟ್ಟಿದರೆ ಆಯ್ತು, ಬಿಸಿ ಬಿಸಿ ರಾಗಿ ಮುದ್ದೆ ರೆಡಿ.  ಆ ಬಳಿಕ ನಮ್ಮಗಿಚ್ಛಿಸಿದ ಸಾಂಬಾರ್ ಅಥವಾ ಸಾರಿನಲ್ಲಿ ಅದ್ದಿ ತಿಂದರಾಯ್ತು.

ಸಾಂಪ್ರದಾಯಿಕ ತಿನಸನ್ನು ವಿಶ್ವವ್ಯಾಪಿ ಖ್ಯಾತಿಗೊಳಿಸುವುದು ಸಂಸ್ಥೆಯ ಉದ್ದೇಶ
ಇನ್ನು ಈ ವಿನೂತನ ಪ್ರಯೋಗಕ್ಕೆ ಮುಂದಾಗಿರುವ ಡಿಎಫ್ ಆರ್ ಎಲ್ ಸಂಸ್ಥೆ, ಕರ್ನಾಟಕದ ಸಾಂಪ್ರದಾಯಿಕ ತಿನಸನ್ನು ವಿಶ್ವವ್ಯಾಪಿ ಖ್ಯಾತಿಗೊಳಿಸುವುದಕ್ಕಾಗಿ ನಾವು ಈ ಪ್ರಯೋಗಕ್ಕೆ  ಮುಂದಾಗಿದ್ದೇವೆ. ಅಂತೆಯೇ ಈ ನೂತನ ಮಿಕ್ಸ್ ಒಂದು ವರ್ಷದ ವರೆಗೂ ಕೆಡದಂತೆ ಇಡಲು ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಡಿಎಫ್ ಆರ್ ಎಲ್ ಸಂಸ್ಥೆಯ ತಾಂತ್ರಿಕ ಅಧಿಕಾರಿ ಪಿ.  ರೇಣುಕಾ ಕುಮಾರಿ ಅವರು ಹೇಳಿದ್ದಾರೆ.

"ಬಹಳಷ್ಟು ಮಂದಿಗೆ ರಾಗಿಮುದ್ದೆ ತಿನಿಸು ಎಂದರೆ ತುಂಬಾ ಇಷ್ಟ ಆದರೆ ಅದನ್ನು ಮಾಡುವ ಬಗೆ ತಿಳಿಯದೇ ಅದರಿಂದ ದೂರ ಉಳಿದಿದ್ದಾರೆ. ಹೀಗಾಗಿ ಇಂತಹವರನ್ನು ದೃಷ್ಟಿಯಲ್ಲಿಟ್ಟುಕೊಂಡು  ಮತ್ತು ನಮ್ಮ ಸಾಂಪ್ರದಾಯಿಕ ತಿನಿಸನ್ನು ಪ್ರಚಾರಗೊಳಿಸುವ ಸಲುವಾಗಿ ಈ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ರೇಣುಕಾಕುಮಾರಿ ಅವರು ಹೇಳಿದ್ದಾರೆ. ಇನ್ನು ಡಿಆರ್ ಆಫ್ ಎಲ್ ಸಂಸ್ಥೆಯ  ಭವಿಷ್ಯದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಸ್ಪೂನ್ ಗಳ ಬದಲಿಗೆ ಜೈವಿಕ ಸ್ಪೂನ್ ಗಳ ಸಂಶೋಧನೆ ಮತ್ತು ಪ್ಲಾಸ್ಟಿಕ್ ರಹಿತ ಖಾದ್ಯ ಪ್ಯಾಕೇಜಿಂಗ್ ವ್ಯವಸ್ಥೆ ಬಗ್ಗೆಯೂ ಸಂಶೋಧನೆ ನಡೆಸುವುದಾಗಿ  ಸಂಸ್ಥೆ ಹೇಳಿಕೊಂಡಿದೆ.

ಮಾನವನಿಗೆ ಪ್ರಕೃತಿದತ್ತ ಉಡುಗೊರೆ ರಾಗಿ
ಇನ್ನು ವೈದ್ಯರು ತಿಳಿಸುವಂತೆ ರಾಗಿಯಲ್ಲಿ ಬಹಳಷ್ಟು ಆರೋಗ್ಯಕರ ಅಂಶವಿದ್ದು, ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಯಥೇಚ್ಛ ಪ್ರೊಟೀನ್ ಗಳು, ಕಾರ್ಬೋಹೈಡ್ರೇಟ್ಸ್ ಗಳು, ಫೈಬರ್,  ಖನಿಜಾಂಶಗಳು, ಅಮಿನೋ ಆ್ಯಸಿಡ್ ಮತ್ತು ಅತೀ ಕಡಿಮೆ ಕೊಬ್ಬಿನಾಂಶವಿದ್ದು, ಮಾನವನ ದೇಹಕ್ಕೆ ಅಗತ್ಯವಾದ ಬಹುತೇಕ ಅಂಶಗಳನ್ನು ಇದೊಂದೇ ಧಾನ್ಯಹೊಂದಿದೆ. ಹೀಗಾಗಿ ಬಹುತೇಕ  ವೈದ್ಯರು ಆಹಾರದಲ್ಲಿ ಹೆಚ್ಚೆಚ್ಚು ರಾಗಿ ಬಳಕೆ ಮಾಡುವಂತೆ ಸಲಹೆ ನೀಡುತ್ತಾರೆ. ಪ್ರಮುಖವಾಗಿ ಸಕ್ಕರೆ ಖಾಯಿಲೆ ಮತ್ತು ರಕ್ತ ಹೀನತೆಯಂತಹ ಸಮಸ್ಯೆ ಇರುವ ರೋಗಿಗಳು ಇದನ್ನು  ಸೇವಿಸಲೇಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com