
ಬೆಂಗಳೂರು: ನಗರದಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ತುಂಬಿ ಪ್ರವಾಹವೇ ಉಂಟಾಗುತ್ತದೆ, ಇದ್ಯಾಕೆ ಹೀಗೆ ಎಂದು ನೀವು ಅನೇಕ ಬಾರಿ ಅಂದುಕೊಂಡಿರಬಹುದು.
ಬೆಂಗಳೂರು ನಗರದಲ್ಲಿ 80 ಮಿಲಿ ಮೀಟರ್ ನಷ್ಟು ಮಳೆ ಬಂದರೂ ಕೂಡ ನೀರು ಸರಾಗವಾಗಿ ಹರಿದು ಹೋಗುವಷ್ಟು ಸಾಮರ್ಥ್ಯವಿದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಮತ್ತು ಅಕ್ರಮ ಭೂ ಒತ್ತುವರಿಯಿಂದಾಗಿ 35ರಿಂದ 40 ಮಿಲಿ ಮೀಟರ್ ನಷ್ಟು ನೀರು ಬಿದ್ದರೂ ಕೂಡ ಸರಾಗವಾಗಿ ಚರಂಡಿಗಳಲ್ಲಿ ಹರಿದು ಹೋಗದೆ ರಸ್ತೆಯಲ್ಲೇ ಉಕ್ಕಿ ಹರಿಯುತ್ತದೆ. ಹಾಗಾಗಿ ಬೆಂಗಳೂರಿನಲ್ಲಿ ಒಂದರ್ಧ ಗಂಟೆ ಮಳೆ ಬಂದರೆ ಸಾಕು ರಸ್ತೆ ತುಂಬೆಲ್ಲಾ ನೀರು ತುಂಬಿ ವಾಹನ ಸಂಚಾರರಿಗೆ ಅನನುಕೂಲವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ.
ಈ ವರ್ಷ ಮುಂಗಾರಿಗೆ ಮುಂಚೆ ಪ್ರವಾಹದಿಂದ ನಗರದ ನಾಗರಿಕರ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ನಗರದ ಸುತ್ತಮುತ್ತ ಪ್ರವಾಹ ಪೀಡಿತ 224 ದುರ್ಲಲ ಜಾಗಗಳನ್ನು ಪಾಲಿಕೆ ಗುರುತಿಸಿದ್ದಾರೆ.
ಬಿಬಿಎಂಪಿ ಮುಖ್ಯ ಎಂಜಿನಿಯರ್ ಸಿದ್ದೇಗೌಡ, ಕಳೆದ ಐದು ವರ್ಷಗಳಿಂದ 224 ದುರ್ಬಲ ತಾಣಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 65 ಸ್ಥಳಗಳನ್ನು ಸರಿಪಡಿಸಲಾಗಿದ್ದು, 37 ಜಾಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಉಳಿದ 122 ಸ್ಥಳಗಳನ್ನು ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿದ್ದು ಅದು ಅಂತಿಮಗೊಳ್ಳಲಿದೆ. ಗುತ್ತಿಗೆದಾರರು ಮೇ 18ಕ್ಕೆ ಕೆಲಸ ಆರಂಭಿಸಿ ತಿಂಗಳಾಂತ್ಯಕ್ಕೆ ಮುಗಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಗುಂಡಿ ಬಿದ್ದ ರಸ್ತೆಗಳ ರಿಪೇರಿ ಮಾಡಲು ವಲಯ ಕಚೇರಿಗಳಿಗೆ ನಾವು ಹಣ ಬಿಡುಗಡೆ ಮಾಡಿದ್ದೇವೆ. ಬಿಬಿಎಂಪಿ ಹೀಗೆ ಹಾಳಾದ, ಗುಂಡಿ ಬಿದ್ದ 189 ರಸ್ತೆಗಳನ್ನು ಗುರುತಿಸಿದ್ದು, ಪೊಲೀಸರು ಕೂಡ 54 ಸ್ಥಳಗಳನ್ನು ಗುರುತಿಸಿದ್ದಾರೆ. ಕೆಲವು ಅವುಗಳಲ್ಲಿ ರಿಪೇರಿಯಾಗಿವೆ. ಮಳೆ ಬಿದ್ದ ಮೇಲೆ ನೀರು ತುಂಬಿಕೊಂಡ ರಸ್ತೆಗಳಿಂದ ನೀರನ್ನು ಹೊರ ತೆಗೆಯಲು 14 ಪ್ರಹರಿ ತಂಡಗಳನ್ನು ಕೂಡ ನಿಯೋಜಿಸಲಾಗಿದೆ ಎಂದರು.
ಇನ್ನು ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿದಾಗ ಮರಗಳು ಬೀಳುವುದು ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಳೆಯದಾದ ಮರಗಳನ್ನು ಮತ್ತು ರೆಂಬೆಗಳನ್ನು ಕತ್ತರಿಸಿ ಹಾಕುವಂತೆ ಸೂಚಿಸಿದ್ದೇವೆ ಎಂದು ಆಯುಕ್ತರು ಹೇಳಿದರು.
ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಸುಬೋಧ್ ಯಾದವ್ ಇತ್ತೀಚೆಗೆ ವಲಯ ಆಯುಕ್ತರಿಗೆ ಆದೇಶವೊಂದನ್ನು ಬಿಡುಗಡೆ ಮಾಡಿ, ಅಂಡರ್ ಪಾಸ್ ಗಳ ಸಾಮೂಹಿಕ ಸ್ವಚ್ಛತೆ ನಡೆಸುವಂತೆ ಸೂಚಿಸಿದ್ದಾರೆ.
Advertisement