ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಗುರುವಾರ ಮಧ್ಯಾಹ್ನ ಸುಮಾರು 8 ನಾಯಿಗಳು 6 ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ.
ನಾಯಿಗಳ ದಾಳಿಗೆ ತುತ್ತಾದ ಬಾಲಕಿ ಅಂಜನಾ ನಗರದ ಬ್ಯಾಡರಳ್ಳಿ ನಿವಾಸಿ ರಮ್ಯಾ ಎಂದು ಗುರುತಿಸಲಾಗಿದ್ದು, ರಮ್ಯಾ ಮೇಲೆ ಏಕಕಾಲಕ್ಕೆ 8ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ, ಕಚ್ಚಿರುವ ಪರಿಣಾಮ ಗಂಭೀರ ಗಾಯಗಳಾಗಿದ್ದು, ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ಪ್ರದೇಶದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ನಿನ್ನೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನನ್ನ ಇಬ್ಬರು ಹೆಣ್ಣು ಮಕ್ಕಳು ನಮ್ಮ ಮನೆಯ ಬಳಿಯೇ ಆಟವಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 8ರಿಂದ 10 ನಾಯಿಗಳು ಇದ್ದಕ್ಕಿದ್ದಂತೆ ಮಕ್ಕಳ ಮೇಲೆ ದಾಳಿ ನಡೆಸಿವೆ. ಅದೃಷ್ಟವಶಾತ್ ನನ್ನ 8 ವರ್ಷದ ಹಿರಿಯ ಮಗಳು ನಾಯಿಗಳಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಿಕ್ಕವಳು ನಾಯಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಾಲಕಿಯ ತಂದೆ ರಾಮೇಗೌಡ ಅವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮ್ಯಾ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆಕೆ ಚೇತರಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ರಾಮೇಗೌಡ ಹೇಳಿದ್ದಾರೆ.