
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದಲಿತರಿಗೆ ‘ಮುಖ್ಯಮಂತ್ರಿ ಭಾಗ್ಯ’ ಕೊಟ್ಟು ಮಾದರಿಯಾಗಬೇಕು. ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಸಹಕರಿಸುವ ಔದಾರ್ಯ ಪ್ರದರ್ಶಿಸಲಿ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಯಲ್ಲಿ ಮಾತನಾಡಿದ ಅವರು ಈ ಹಿಂದೆ ಬಾಬು ಜಗಜೀವನರಾಂ ಕಾಂಗ್ರೆಸ್ ತೊರೆದಾಗ ರಾಜೀವ್ ಗಾಂಧಿ ಅವರ ಮನೆಗೆ ಹೋಗಿ ಪಕ್ಷಕ್ಕೆ ಕರೆತರಲು ಮುಂದಾಗಿದ್ದರು. ದುರದೃಷ್ಟವಶಾತ್ ಜಗಜೀವನರಾಂ ಬದುಕುಳಿಯಲಿಲ್ಲ. ಬದುಕಿದ್ದರೆ ಖಂಡಿತ ಅವರಿಗೆ ಉನ್ನತ ಸ್ಥಾನ ಸಿಗುತ್ತಿತ್ತು. ರಾಜೀವ್ ಅವರ ಈ ಆದರ್ಶವನ್ನು ಸಿದ್ದರಾಮಯ್ಯ ಮಾದರಿಯಾಗಿಸಿಕೊಳ್ಳಬೇಕೆಂದರು. ರಾಜೀವ್ ಕನಸಿನಂತೆ ದಲಿತರ ಸಬಲೀಕರಣಕ್ಕೆ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಪಂಚರಾಜ್ಯಗಳ ಫಲಿತಾಂಶವನ್ನು ಟಿ.ವಿ.ಯಲ್ಲಿ ನೋಡಿ ಕಣ್ಣೀರು ಹಾಕಿದೆ. ಸಣ್ಣಪುಟ್ಟ ಜಾತಿ, ಸಮುದಾಯಗಳಿಗೆ ಅಸ್ವಿತ್ವ ನೀಡಿದ ಕಾಂಗ್ರೆಸ್ ಪಕ್ಷ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಎಚ್ಚೆತ್ತುಕೊಂಡು ಪಕ್ಷಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ಸಿಗರಾದ ನಾವು ಎತ್ತ ಸಾಗಿದ್ದೇವೆ? ಎಂದರು.
Advertisement