
ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಲಾಯಿಸಿ ತೊಂದರೆಯನ್ನುಂಟುಮಾಡುವ ಬಗ್ಗೆ ಜಾಗೃತಿ ಮೂಡಿಸಲು ವಿಡಿಯೋ ಮಾಡುತ್ತಿದ್ದ ಟೆಕ್ಕಿಗೆ ವ್ಯಕ್ತಿಯೊಬ್ಬ ಥಳಿಸಿರುವ ಘಟನೆ ನಿನ್ನೆ(ಸೋಮವಾರ) ಕೋರಮಂಗಲದಲ್ಲಿ ನಡೆದಿದೆ.
26 ವರ್ಷದ ಅಂಕಿತ್ ಚೌಧರಿ ಹಲ್ಲೆಗೊಳಗಾದ ಟೆಕ್ಕಿ. ವಿಪ್ರೊ ಪಾರ್ಕ್ ವೃತ್ತದ ಫ್ಲಿಪ್ ಕಾರ್ಟ್ ಕಚೇರಿ ಸಮೀಪ ನಿನ್ನೆ ಬೆಳಗಿನ ಹೊತ್ತು ಅಂಕಿತ್ ವಿಡಿಯೋ ಮಾಡುವ ಹೊತ್ತಿಗೆ ಈ ಘಟನೆ ನಡೆದಿದೆ. ಈ ಸಂಪೂರ್ಣ ಘಟನೆಯ ವಿಡಿಯೋವನ್ನು ಅಂಕಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು, 600ಕ್ಕೂ ಹೆಚ್ಚು ಜನರು ಅದನ್ನು ಶೇರ್ ಮಾಡಿದ್ದಾರೆ.
ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವ ಬದಲು ಕೆಲವರು ಪಾದಚಾರಿ ಮಾರ್ಗದಲ್ಲಿ ಚಲಾಯಿಸಿ ಜನರಿಗೆ ತೊಂದರೆ ಕೊಡುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಟ್ರಾಫಿಕ್ ನಿಯಮವನ್ನು ಮುರಿಯಬಾರದು ಎಂದು ಮನದಟ್ಟು ಮಾಡಲು ವಿಡಿಯೋ ಮಾಡಿ ಟ್ರಾಫಿಕ್ ಪೊಲೀಸ್ ವೆಬ್ ಸೈಟ್ ನಲ್ಲಿ ಹಾಕಲು ಉದ್ದೇಶಿಸಿದ್ದೆ. ಇದರ ಹಿಂದೆ ಯಾರನ್ನೂ ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಅಂಕಿತ್ ತಿಳಿಸಿದ್ದಾರೆ.
ಅಂಕಿತ್ ಅವರು ಈ ರೀತಿ ಫೋಟೋ, ವಿಡಿಯೋ ತೆಗೆದು ಕಳುಹಿಸುವುದು ಇದೇ ಮೊದಲಲ್ಲ. ತಮಗೆ ಸಮಯ ಸಿಕ್ಕಾಗಲೆಲ್ಲ ಮಾಡುತ್ತಿದ್ದರು. ಆದರೆ ನಿನ್ನೆ ಹೀಗೆ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ವ್ಯಕ್ತಿಯ ವಿಡಿಯೋ ಮಾಡುವಾಗ ಆತ ವಾಹನದಿಂದ ಕೆಳಗಿಳಿದು ಹಲ್ಲೆ ಮಾಡತೊಡಗಿದ. ಘಟನೆಯೆಲ್ಲವೂ ಅಂಕಿತ್ ರ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ.
'' ಚಿತ್ರಗಳು ಹಾಗೂ ವಿಡಿಯೋಗಳನ್ನು ನಾಶ ಮಾಡುವ ಉದ್ದೇಶದಿಂದ ನನ್ನ ಫೋನನ್ನು ಧ್ವಂಸ ಮಾಡಲೆತ್ನಿಸಿದ. ಇದೊಂದು ಅನಿರೀಕ್ಷಿತ, ಪುಂಡಾಟಿಕೆಯ ನಡವಳಿಕೆ ಎಂದು ಅಂಕಿತ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ವ್ಯಕ್ತಿ ಹಲ್ಲೆ ಮಾಡಿರುವ ದೃಶ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರು ಸೇರಿದಂತೆ ನೂರಾರು ಜನರು ಹಂಚಿಕೊಂಡಿದ್ದಾರೆ. ಇದು ಹಲ್ಲೆ ಘಟನೆ ಆಗಿರುವುದರಿಂದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಅಂಕಿತ್ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ದ್ವಿಚಕ್ರ ವಾಹನವು ಹನುಮೇಗೌಡ ಎಂಬುವವರ ಹೆಸರಿನಲ್ಲಿ ನೋಂದಣೆಯಾಗಿದೆ. ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement