ವಾಹನ ಸವಾರರ ಗಮನಕ್ಕೆ: ನಾಳೆ, ನಾಡಿದ್ದು ಪೆಟ್ರೋಲ್ ಬಂಕ್ ಮುಷ್ಕರ

ನ್ಯಾಯಯುತ ಕಮಿಷನ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನ್ಯಾಯಯುತ ಕಮಿಷನ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ನವೆಂಬರ್ 3 ಮತ್ತು 4ರಂದು ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಂದ ಇಂಧನ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿವೆ. ಹೀಗಾಗಿ ನಾಳೆ ಮತ್ತು ನಾಡಿದ್ದು ಪೆಟ್ರೋಲ್, ಡೀಸೆಲ್ ದೊರೆಯುವ ಸಾಧ್ಯತೆ ಕಡಿಮೆ. 
ನವೆಂಬರ್ 5ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಲಿದೆ. 6ಗಂಟೆ ನಂತರ ಬಂಕ್ ಬಂದ್ ಆಗಲಿದೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ತೆರೆದಿರಲಿವೆ ಎಂದು ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಅಧ್ಯಕ್ಷ ರವೀಂದ್ರನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸರ್ಕಾರಿ ರಜಾದಿನಗಳು, 2ನೇ ಶನಿವಾರ ಹಾಗೂ ಭಾನುವಾರ ಕೂಡ ಬಂಕ್​ಗಳು ತೆರೆಯಲ್ಲ.  ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಡೀಲರ್ಸ್ ಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ನ.3 ಮತ್ತು ನ.4 ರಂದು ತೈಲ ಖರೀದಿಯನ್ನಷ್ಟೇ ಬಂಕ್‌ಗಳು ಸ್ಥಗಿತಗೊಳಿಸುತ್ತಿವೆ. ಹೀಗಾಗಿ ಈ ಎರಡೂ ದಿನಗಳೂ ಬಂಕ್‌ಗಳಲ್ಲಿ ಸಂಗ್ರಹವಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com