ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪ ಎದುರಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮನೆ ತೆರವುಗೊಳಿಸುವಂತೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಎಸ್.ಎಸ್.ಆಸ್ಪತ್ರೆ ತೆರವುಗೊಳಿಸುವಂತೆ ಅಧಿಕಾರಿಗಳು ಅಂತಿಮ ನೋಟಿಸ್ ಜಾರಿಗೊಳಿಸಿದ್ದಾರೆ.
ನಟ ದರ್ಶನ್ ಅವರು ಒಟ್ಟು 2,100 ಚ. ಅಡಿ ರಾಜ ಕಾಲುವೆ ಒತ್ತುವರಿ ಮಾಡಿದ್ದು, ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ಸಂಪೂರ್ಣ ಒತ್ತುವರಿ ಜಾಗದಲ್ಲಿರುವುದು ದೃಢಪಟ್ಟಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಅವರ ಕಚೇರಿಯ ಮೂಲಗಳ ಪ್ರಕಾರ, ಮುಂದಿನ ಏಳು ದಿನಗಳಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಇಬ್ಬರಿಗೂ ಅಂತಿಮ ನೋಟಿಸ್ ನೀಡಲಾಗಿದ್ದು, ಒಂದು ವೇಳೆ ತೆರವುಗೊಳಿಸದಿದ್ದೆರೆ ತಾವೇ ತೆರವು ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಈ ಮುಂಚೆ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ 67 ಮಂದಿಗೆ ನೋಟಿಸ್ ನೀಡಿದ್ದರು. ನೋಟಿಸ್ ಗೆ ಒತ್ತುವರಿದಾರರು ಪ್ರತಿಕ್ರಿಯೆ ನೀಡಿದ್ದು, ಅದನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಅಕ್ರಮವಾಗಿ ಲೇ ಔಟ್ ನಿರ್ಮಿಸಿದ ಐಡಿಯಲ್ ಹೋಮ್ ಹಾಗೂ ಲೇಔಟ್ ಗೆ ಅನುಮತಿ ನೀಡಿದ ಬಿಡಿಎ ಅಧಿಕಾರಿಗಳು ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವಿ. ಶಂಕರ್ ಅವರು ಹೇಳಿದ್ದಾರೆ.
ರಾಜ ಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಕೇವಲ ಬಡವರ ಮನೆಗಳನ್ನು ಮಾತ್ರ ತೆರವುಗೊಳಿಸುತ್ತಿದೆ. ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳನ್ನು ಸರ್ಕಾರ ತೆರವು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಟ ದರ್ಶನ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ತೆರವುಗೊಳಿಸುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಿತ್ತು.