ಅಕ್ಟೋಬರ್ 17ರಂದು ತೀರ್ಥರೂಪಿಣಿಯಾಗಿ "ಕಾವೇರಿ" ದರ್ಶನ

ಕನ್ನಡ ನಾಡಿನ ಜೀವನದಿ ಹಾಗೂ ಕೊಡವರ ಕುಲದೇವತೆ ಕಾವೇರಿ ಇದೇ ಅಕ್ಟೋಬರ್ 17ರಂದು ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.
ಕಾವೇರಿ ತೀರ್ಥೋದ್ಬವ (ಸಂಗ್ರಹ ಚಿತ್ರ)
ಕಾವೇರಿ ತೀರ್ಥೋದ್ಬವ (ಸಂಗ್ರಹ ಚಿತ್ರ)

ಕೊಡಗು: ಕನ್ನಡ ನಾಡಿನ ಜೀವನದಿ ಹಾಗೂ ಕೊಡವರ ಕುಲದೇವತೆ ಕಾವೇರಿ ಇದೇ ಅಕ್ಟೋಬರ್ 17ರಂದು ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.

ಕೊಡಗು ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 6.29ಕ್ಕೆ ಸಲ್ಲು ಶುಭ ತುಲಾ ಲಗ್ನದಲ್ಲಿ ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.  ತೀರ್ಥೋದ್ಭವಕ್ಕೆ ಕೊಡಗು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದು, ಇಂದು ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಅವರು ಸಿದ್ಧತಾ ಕಾರ್ಯಗಳ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಸಿದ್ಧತಾ ಕಾರ್ಯಗಳ ಮಾಹಿತಿ ಹಂಚಿಕೊಂಡು ಜಿಲ್ಲಾಧಿಕಾರಿ ವಿನ್ಸೆಂಟ್ ಅವರು, ಕೊಡಗು ಜಿಲ್ಲಾಡಳಿತ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ  ಮಾಡಿಕೊಂಡಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿದೆ. ಪ್ರಮುಖವಾಗಿ ವಿರಾಜಪೇಟೆ, ಮಡಿಕೇರಿ, ಗೋಣಿಕೊಪ್ಪ, ಭಾಗಮಂಡಲ ಸೇರಿದಂತೆ  ವಿವಿಧೆಡೆಯಿಂದ ವಿಶೇಷ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಭಕ್ತರ ಮೂಲಭೂತ ಸೌಕರ್ಯಗಳ ಕುರಿತು ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ ದೇವಾಲಯದ ಅವರಣದಲ್ಲಿ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ  ಮಾಡಲಾಗಿದೆ. ತೀರ್ಥೋದ್ಬವ ಸಂದರ್ಭದಲ್ಲಿ ದೇವಾಲಯದಲ್ಲಿ ನಿರಂತರ 1 ತಿಂಗಳ ಕಾಲ ಅನ್ನದಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೊಡಗು ಏಕೀಕರಣ ರಂಗದಿಂದ ಭಕ್ತರಿಗೆ ಅನ್ನದಾನ  ಕಾರ್ಯಕ್ರಮ ನಡೆಯಲಿದೆ. ಭಕ್ತರಿಗಾಗಿ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ ಕೂಡ ಮಾಡಲಾಗಿದೆ. ಇದಲ್ಲದೆ ದೇವಾಲಯದಿಂದ ಸುಮಾರು 8 ಕಿ.ಮೀ ವರೆಗೂ ವಿಶೇಷ ದೀಪಾಲಂಕಾರದ  ವ್ಯವಸ್ಥೆ ಮಾಡಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿವರೆಗೂ ದೀಪಾಲಂಕಾರ ಮಾಡಲಾಗಿದೆ ಎಂದು ರಿಚರ್ಡ್ ಹೇಳಿದರು.

ತೀರ್ಥೋದ್ಭವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಇನ್ನು ತೀರ್ಥೋದ್ಭವಕ್ಕೆ ಅಪಾರ ಪ್ರಮಾಣದ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಕೊಡಗು ಎಸ್ ಪಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು  ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, 15 ಪೊಲೀಸ್ ಇನ್ಸ್ ಪೆಕ್ಟರ್ಸ್ ಗಳು, 25 ಎಸ್ ಐ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದಲ್ಲದೆ ಹೊರ ಜಿಲ್ಲೆಗಳ ಪೊಲೀಸ್  ಸಿಬ್ಬಂದಿಗಳನ್ನು ಕೂಡ ಹೆಚ್ಚುವರಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಅಂತೆಯೇ ದೇವಾಲಯದ ಸುತ್ತ ಸುಮಾರು 35 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದರು.

ಕಾವೇರಿ ಕೊಡಗಿಗರ ಕುಲದೇವತೆಯಾಗಿದ್ದು, ತೀರ್ಥೋದ್ಭವ ದಿನವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಭಾಗಮಂಡಲದ "ತಲಕಾವೇರಿ" ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು,  ತೀರ್ಥೋದ್ಭವದ ದಿನದಂದು ಕಾವೇರಿ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಪುಣ್ಯ ಮತ್ತು ಒಳಿತಾಗುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರತಿ ವರ್ಷ ನಡೆಯುವ ತೀರ್ಥೋದ್ಭವದಲ್ಲಿ  ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತೀರ್ಥವನ್ನು ತಮ್ಮ ತಮ್ಮ ಮನೆಗೆ ಕೊಂಡೊಯ್ಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com