ಕೊನೆಗೂ ಸರಣಿ ಅತ್ಯಾಚಾರಿಯನ್ನು ಬಂಧಿಸಿದ ಪೊಲೀಸರು

ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಅತ್ಯಾಚಾರ ಮಾಡಿ ದರೋಡೆ ಮಾಡುತ್ತಿದ್ದ ಸರಣಿ ಅತ್ಯಾಚಾರಿಯೊಬ್ಬನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ...
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
ಬಂಧಿತ ಆರೋಪಿಗಳೊಂದಿಗೆ ಪೊಲೀಸರು

ಹುಬ್ಬಳ್ಳಿ: ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಅತ್ಯಾಚಾರ ಮಾಡಿ ದರೋಡೆ ಮಾಡುತ್ತಿದ್ದ ಸರಣಿ ಅತ್ಯಾಚಾರಿಯೊಬ್ಬನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಲಿವಾಳ ಗ್ರಾಮದ ಫಕೀರಪ್ಪ ಕಾಡಣ್ಣವರ ಬಂಧಿತ ಆರೋಪಿ. ಈತನೊಂದಿಗೆ ಸಹಚರರಾದ ಕೆ. ಸಂತೋಷ ಬಾಬು, ಬಸವರಾಜ ಗದಿಗೆಣ್ಣವರ ಹಾಗೂ ಗದಗ ಜಿಲ್ಲೆಯ ಮಹಾದೇವಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಫಕೀರಪ್ಪನನ್ನು ಎರಡು ಅತ್ಯಾಚಾರ ಹಾಗೂ 5 ದರೋಡೆ ಪ್ರಕರಣ ಸಂಬಂಧ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಇದರಂತೆ ಸಾಕಷ್ಟು ಪರಿಶ್ರಮದ ಬಳಿಕ ಕೊನೆಗೂ ಫಕೀರಪ್ಪನನ್ನು ಪೊಲೀಸರು ಗದಗ ಬಸ್ ನಿಲ್ದಾಣದಲ್ಲಿ ಗುರುವಾರ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಫಕೀರಪ್ಪ 7 ಅತ್ಯಾಚಾರ ಹಾಗೂ 7 ದರೋಡೆಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೆಳೆಯನಾದ ಬಸವರಾಜು ಎಂಬುವವನ ಸಹಾಯದೊಂದಿಗೆ ಅತ್ಯಾಚಾರ, ದರೋಡೆಗಳನ್ನು ಆರೋಪಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಮೂಲಗಳ ಪ್ರಕಾರ ಈತ 20ಕ್ಕೂ ಹೆಚ್ಚು ಅಚ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾಗುತ್ತಿದೆ. ವಿಚಾರಣೆ ವೇಳೆ ಫಕೀರಪ್ಪ ತಾನು ಎಷ್ಟು ಅತ್ಯಾಚಾರ ಮಾಡಿದ್ದೇನೆಂಬ ಸಂಖ್ಯೆಯೇ ನೆನಪಿಲ್ಲ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

ಕೆಲಸಕ್ಕೆ ಹೋಗುವ ಮಹಿಳೆಯರನ್ನೇ ತನ್ನ ಗುರಿಯಾಗಿಸಿಕೊಳ್ಳುತ್ತಿದ್ದ ಈತ ಮಹಿಳೆಯರ ನಂಬಿಕೆಯನ್ನು ಗಳಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಬಳಿಕ ಅವರ ಬಳಿಯಿರುತ್ತಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗುತ್ತಿದ್ದ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮಹಿಳೆಯೊಬ್ಬರಿಗೆ ಮನೆ ಕೆಲವನ್ನು ಕೊಡಿಸುವುದಾಗಿ ಹೇಳಿದ್ದ ಫಕೀರಪ್ಪ ನಂತರ ಆಕೆಯ ನಂಬಿಕೆಯನ್ನು ಗಳಿಸಿದ್ದ. ಫಕೀರಪ್ಪನ ಮಾತನ್ನು ನಂಬಿದ್ದ ಮಹಿಳೆಯ ಆತನೊಂದಿಗೆ ಹೋಗಿದ್ದಳು. ಇದರಂತೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ನಂತರ ಮಹಿಳೆ 2015ರ ಡಿ.30ರಂದು ಪ್ರಕರಣ ದಾಖಲಿಸಿದ್ದಳು.

ಇದರಂತೆ ಫಕೀರಪ್ಪನ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಫಕೀರಪ್ಪನನ್ನು ಹಿಡಿಯುವ ಸಲುವಾಗಿ ಅಧಿಕಾರಿಗಳು ವಿಶೇಷ ತಂಡವೊಂದನ್ನು ರಚಿಸಿದ್ದರು. ಇದೀಗ ಫಕೀರಪ್ಪ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧನಕ್ಕೊಳಗಾದ ಮೂವರು ಆರೋಪಿಗಳಿಂದ ಪೊಲೀಸರು ರು. 19 ಲಕ್ಷದ ಚಿನ್ನಾಭರಣ, ರು.21 ಸಾವಿರ ಬೆಳ್ಳಿ, 2 ಬೈಕ್ ಹಾಗೂ 32 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅತ್ಯಾಚಾರ ಹಾಗೂ ದರೋಡೆ ಮಾಡುತ್ತಿದ್ದ ಫಕೀರಪ್ಪ ತಾನೊಬ್ಬ ಸರ್ಕಾರದಲ್ಲಿ ಉದ್ಯೋಗ ಮಾಡುತ್ತಿರುವ ವ್ಯಕ್ತಿ, ವೈದ್ಯ ಹಾಗೂ ಪೊಲೀಸ್ ಎಂದು ಹೇಳಿ ಜನರ ನಂಬಿಕೆಯನ್ನು ಗಳಿಸುತ್ತಿದ್ದ. ಮಹಾದೇವಿ ಎಂಬಾಕೆ ಈತನಿಗೆ ಸಹಾಯ ಮಾಡುತ್ತಿದ್ದಳು. ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರ ಮಾಹಿತಿಯನ್ನು ಈತನಿಗೆ ನೀಡುತ್ತಿದ್ದಳು. ಅಲ್ಲದೆ, ಅತ್ಯಾಚಾರ ಸಂತ್ರಸ್ಥರಿಗೆ ದೂರು ನೀಡದಂತೆ ಬೆದರಿಯೊಡ್ಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com