
ಮಂಡ್ಯ: ಕಾವೇರಿ ನೀರಿಗಾಗಿ ಆಗ್ರಹಿಸಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದೆ ರಮ್ಯಾ ಪಾಲ್ಗೊಳ್ಳದ ಕುರಿತಂತೆ ಅಸಮಾಧಾನಗೊಂಡಿರುವ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಬೇಜವಾಬ್ದಾರಿ ಹೇಳಿಕೆ ನೀಡುವವರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.
ತಮ್ಮ ಸ್ವಗೃಹದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾದೇಗೌಡ ಅವರು, ರಮ್ಯಾ ಈಗಿನ್ನೂ ರಾಜಕೀಯ ನೋಡುತ್ತಿದ್ದಾರೆ. ಅನುಭವವಿಲ್ಲ. ಈ ಹಿಂದೆ ನನ್ನನ್ನು ಭೇಟಿ ಮಾಡಲು ಬಂದಿದ್ದಾಗ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೆ. ಆದರೆ ಅವರು ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಂದ್ ಹಿನ್ನಲೆಯಲ್ಲಿ ರಮ್ಯಾ ಮಾಡಿದ್ದ ಟ್ವೀಟ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ ಮಾದೇಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರೇ ಇಲ್ಲ ಎಂದ ಮೇಲೆ ಅದೆಲ್ಲಿಂದ ರೈತರಿಗೆ ನೀರು ಬಿಡುತ್ತಾರೆ ಎಂದು ಪ್ರಶ್ನಿಸಿದರು. ಅಂತೆಯೇ ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವವರ ಕುರಿತಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ಸಮಯ ಬಂದಾಗ ಜನರೇ ಅವರಿಗೆ ಸರಿಯಾದ ರೀತಿಯಲ್ಲಿ ಉತ್ತರಿಸುತ್ತಾರೆ. ನಾನೇಕೆ ಈಗ ಪ್ರತಿಕ್ರಿಯಿಸಲಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement