
ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯ ಸಂರಕ್ಷಣೆಗಾಗಿ ರಾಜ್ಯಸರ್ಕಾರಕ್ಕೆ ಶನಿವಾರ ಹೈಕೋರ್ಟ್ ನವೆಂಬರ್ ವರೆಗೂ ಗಡುವು ನೀಡಿದೆ.
ಜಲಾಶಯ ಮಾಲಿನ್ಯ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನಿನ್ನೆ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಇದರಂತೆ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಜಿ ಶಿವಣ್ಣ ಅವರು, ಜಲಾಶಯ ಸಂರಕ್ಷಣೆಗೆ ಸರ್ಕಾರಕ್ಕೆ ನವೆಂಬರ್ ವರೆಗೂ ಸಮಯ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ್ ಅವರ ಬಳಿ ಮನವಿ ಸಲ್ಲಿಸಿದ್ದರು. ಇದರಂತೆ ಮನವಿಯನ್ನು ಸ್ವೀಕರಿಸಿರುವ ಅವರು, ಜಲಾಶಯ ರಕ್ಷಣೆಗೆ ನವೆಂಬರ್ ವರೆಗೂ ಕಾಲಾವಕಾಶವನ್ನು ನೀಡಿದ್ದಾರೆ.
ನ್ಯಾಯಪೀಠವು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಗೆ 2014, ಫೆಬ್ರವರಿ 2 ರಂದು ಜಲಾಶಯ ಸಂರಕ್ಷಣೆ ಕುರಿತಂತೆ ಅಧ್ಯಯನ ನಡೆಯುವಂತೆ ಸೂಚನೆ ನೀಡಿತ್ತು. ಇದರಂತೆ ಕೆಲ ತಿಂಗಳ ಹಿಂದಷ್ಟೇ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದರು.
ವರದಿಯಲ್ಲಿ ನೀರು ಸಂರಕ್ಷಣೆಗೆ ಜಲಾಶಯ ಅತ್ಯಂತ ಮುಖ್ಯವಾಗಿದ್ದು, ಇದೊಂದು ಅತ್ಯಂತ ಪ್ರಮುಖವಾದ ಜಲಾಶಯವಾಗಿದೆ. ಜಲಾಶಯದಲ್ಲಿರುವ ಮುಖ್ಯ ದ್ವಾರದ ಮೇಲೆ ಮತ್ತು ಇನ್ನಿತರೆ ವ್ಯವಸ್ಥೆಯಗಳ ಕಡೆಗೆ ಸೂಕ್ತ ರೀತಿಯಲ್ಲಿ ಗಮನಹರಿಸಬೇಕಿದೆ ಎಂದು ತಿಳಿಸಿತ್ತು. ಜಲಾಶಯದ ಟಿಜಿಆರ್, ಹೆಸರುಘಟ್ಟ ಟ್ಯಾಂಕ್ ಹಾಗೂ ಇನ್ನಿತರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.
Advertisement