
ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಹಾಗೂ ಕಾವೇರಿ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಕಾರಣ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಮಿಳುನಾಡಿನ ಹಲವೆಡೆ ಕರ್ನಾಟಕದ ವಾಹನಗಳಿಗೆ ಬೆಂಕಿ ಹಚ್ಚಿರುವುದು ಹಾಗೂ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವುದು ಗೊತ್ತಾಗುತ್ತಿದ್ದಂತೆಯೇ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ನೊಂದಣಿಯ ಕಾರು, ಬಸ್ಸು, ಲಾರಿ ಸೇರಿದಂತೆ ಎಲ್ಲ ವಾಹನಗಳನ್ನು ಅತ್ತಿಬೆಲೆ ಗಡಿಯಲ್ಲಿ ತಡೆದು ಕರ್ನಾಟಕದತ್ತ ವಾಪಸ್ ಕಳುಹಿಸಲಾಯಿತು.
ಮೂಲಗಳ ಪ್ರಕಾರ ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲಿ 80 ಲಕ್ಷ ತಮಿಳಿಗರು ವಾಸವಿದ್ದರು. ಬೆಂಗಳೂರಿನಲ್ಲೇ 25 ಲಕ್ಷ ಮಂದಿ ತಮಿಳು ಭಾಷಿಕರು ನೆಲೆಸಿದ್ದರು. ದಶಕಗಳಿಂದಲೂ ತಮಿಳು ಭಾಷಿಗರು ಕರ್ನಾಟದಲ್ಲೇ ನೆಲೆ ಕಂಡು ಕೊಂಡಿದ್ದಾರೆ.
ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರನ್ ಸಿಎ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿರುವ ತಮಿಳು ಭಾಷಿಗರಿಗೆ ರಕ್ಷಣೆ ನೀಡುವಂತೆ ಕೋರಿದ್ದಾಗಿ ಹೇಳಿದ್ದಾರೆ.
ಜೊತೆಗೆ ತಮಿಳುನಾಡಿನಲ್ಲಿರುವ ಕನ್ನಡಿರಿಗೆ ರಕ್ಷಣೆ ನೀಡುವಂತೆಯೂ ಸಹ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಗಡಿಯಲ್ಲಿ ಪೊಲೀಸರು ಕೈಗೊಂಡಿದ್ದ ಸೂಕ್ತ ಮುಂಜಾಗ್ರತೆಯಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಕೆಲ ಕನ್ನಡಪರ ಸಂಘಟನೆ ಗಳ ಕಾರ್ಯಕರ್ತರು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಇನ್ನೂ ತಮಿಳು ಭಾಷಿಗರು ವಾಸವಿರುವ ಬೆಂಗಳೂರಿನ ಹಲವು ಪ್ರದೇಶಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
Advertisement