ಕೊಪ್ಪಳ: ಶಿಕ್ಷಕರಿಲ್ಲದ ಶಾಲೆಯಲ್ಲಿ ಮಕ್ಕಳೇ ಶಿಕ್ಷಕರು

ಶಾಲಾ ಕಟ್ಟಡವಿದೆ ಆದರೆ, ಶಿಕ್ಷಕರಿಲ್ಲ...ಕೋಣೆಗಳೇ ಇಲ್ಲದೆ ನಡೆಯುತ್ತಿದೆ ತರಗತಿಗಳು...ಬೇಕಾಬಿಟ್ಟಿಯಾಗಿ ನಿರ್ಮಿಸಿರುವ ಶಾಲಾ ಕಟ್ಟಡ...ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ...
ಕೊಪ್ಪಳ: ಶಿಕ್ಷಕರಿಲ್ಲದ ಶಾಲೆಯಲ್ಲಿ ಮಕ್ಕಳೇ ಶಿಕ್ಷಕರು
ಕೊಪ್ಪಳ: ಶಿಕ್ಷಕರಿಲ್ಲದ ಶಾಲೆಯಲ್ಲಿ ಮಕ್ಕಳೇ ಶಿಕ್ಷಕರು
Updated on

ಕೊಪ್ಪಳ: ಶಾಲಾ ಕಟ್ಟಡವಿದೆ ಆದರೆ, ಶಿಕ್ಷಕರಿಲ್ಲ...ಕೋಣೆಗಳೇ ಇಲ್ಲದೆ ನಡೆಯುತ್ತಿದೆ ತರಗತಿಗಳು...ಬೇಕಾಬಿಟ್ಟಿಯಾಗಿ ನಿರ್ಮಿಸಿರುವ ಶಾಲಾ ಕಟ್ಟಡ...ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳೇ ಶಿಕ್ಷಕರು...ಇದು ಕೊಪ್ಪಳದಲ್ಲಿರುವ ಸರ್ಕಾರಿ ಶಾಲೆಯ ದುಸ್ಥಿತಿ.

ಶಾಲೆಗಳಲ್ಲಿ ಮಕ್ಕಳಿಲ್ಲ ಎಂದು ಹೇಳಿ ರಾಜ್ಯ ಸರ್ಕಾರ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಆದರೆ, ಮಕ್ಕಳು ಬರುವ ಶಾಲೆಗಳಿಗೆ ಸರಿಯಾದ ರೀತಿಯಲ್ಲಿ ವಸತಿ ಸೌಕರ್ಯಗಳನ್ನು ನೀಡುತ್ತಿಲ್ಲ.

ಯಲಬುರ್ಗಿ ತಾಲೂಕಿನ ಎನ್. ಜೀರಕುಂಟಿಯಲ್ಲಿ ಕುಗ್ರಾಮವೊಂದಿದೆ. ಇಲ್ಲಿ ಸರ್ಕಾರ 1973 ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೇನೋ ತೆರೆದಿದೆ. ಆದರೆ, ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಶಾಲೆ ತೆರೆದಾಗ ನಾಲ್ವರು ಶಿಕ್ಷಕರನ್ನು ಈ ಶಾಲೆಗೆ ನೇಮಕ ಮಾಡಲಾಗಿದೆ. ಆದರೆ, ಪ್ರಸ್ತುತ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದು ಮಾತ್ರ ಇಬ್ಬರು ಶಿಕ್ಷಕರು. ಈ ಇಬ್ಬರಲ್ಲೂ ಒಬ್ಬ ಶಿಕ್ಷಕಿ ಮಾತ್ರ ಪ್ರತೀನಿತ್ಯ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಬ್ಬ ಶಿಕ್ಷಕರು ಅತಿಥಿಯಂತೆ ಆಗಾಗ ಬಂದು ಹೋಗುತ್ತಿರುತ್ತಾರೆಂದು ಅಲ್ಲಿನ ಮಕ್ಕಳು ಹೇಳಿಕೊಂಡಿದ್ದಾರೆ.

ಇನ್ನು ಶಾಲೆಯಲ್ಲಿ ಮೂರು ಕೊಠಡಿಗಳಿವೆ. ಇದರಲ್ಲಿ ಒಂದು ಕೊಠಡಿಯನ್ನು ಶಾಲಾ ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ. ಎತ್ತೆರಡು ಕೊಠಡಿಯನ್ನು ಮಕ್ಕಳ ಬೋಧನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಶಾಲೆಯಲ್ಲಿ 1ನೇ ತರಗತಿಯಿಂದ 5 ತರಗತಿಯಿದ್ದು, ಒಟ್ಟು 80 ವಿದ್ಯಾರ್ಥಿಗಳ ಸಂಖ್ಯೆ ಈ ಶಾಲೆಯಲ್ಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಶಿಕ್ಷಕರಿಲ್ಲದ ಕಾರಣ ಹಿರಿಯ ವಿದ್ಯಾರ್ಥಿಗಳೇ ಕಿರಿಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು, ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳೇ ಶಿಕ್ಷಕರಾಗಿದ್ದಾರೆ. ಇನ್ನು ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯವಾಗಲಿ, ಕುಡಿಯುವ ನೀರಿನ ವ್ಯವಸ್ಥೆಗಳಾಗಲಿ ಯಾವುದೂ ಇಲ್ಲ ಎಂದು 5ನೇ ತರಗತಿಯಲ್ಲಿ ಓದುತ್ತಿರುವ ಸಂತೋಷ್ ಎಂಬ ವಿದ್ಯಾರ್ಥಿ ಹೇಳಿದ್ದಾರೆ.

ಶಿಕ್ಷಕರ ಕೊರತೆ ಈ ಶಾಲೆಯಲ್ಲಿ ಒಂದರಲ್ಲೇ ಅಲ್ಲ, ಕುಷ್ಟಗಿ ತಾಲೂಕಿನಲ್ಲಿ 222 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ 43 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ 272 ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 60 ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಲಬುರ್ಗಿ ಕ್ಷೇತ್ರದ ಶಿಕ್ಷಣಾಧಿಕಾರಿ ಬಸವರಾಜಸ್ವಾಮಿ ಅವರು, ಪ್ರಸ್ತುತ ಶಾಲೆಯಲ್ಲಿರುವ ಇಬ್ಬರು ಶಿಕ್ಷಕರಿದ್ದು, ಇಬ್ಬರೂ ಶಿಕ್ಷಕರಿಗೂ ಪ್ರತೀನಿತ್ಯ ಶಾಲೆಗೆ ಬರುವಂತೆ ಸೂಚನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಕುಷ್ಟಗಿ ಬಿಇಒ ಎಂ.ಬಿ. ಮೊರತಾಗಿ ಮಾತನಾಡಿ, ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸರ್ಕಾರದ ಬಳಿ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಶ್ಯಾಮ್ ಸುಂದರ್ ಅವರು ಮಾತನಾಡಿ, ಆದ್ಯತೆಯ ಆಧಾರದ ಮೇಲೆ ಕುಗ್ರಾಮಗಳಲ್ಲಿರುವ ಶಾಲೆಗಳನ್ನು ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com