ಅಕ್ಟೋಬರ್ ಅಂತ್ಯದವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಅಕ್ಟೋಬರ್ ಅಂತ್ಯದವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ವಿವಾದದಿಂದ ಕಂಗೆಟ್ಟಿರುವ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ಟೋಬರ್ ಅಂತ್ಯದವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ವಿವಾದದಿಂದ ಕಂಗೆಟ್ಟಿರುವ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರು ಬಿಡುವ ಭರವಸೆಯನ್ನು ನೀಡಿದ್ದಾರೆ.

ಅಕ್ಟೋಬರ್ ಅಂತ್ಯದವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿದ್ದು, ಇದರಿಂದ ಕಾವೇರಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಕೊಂಚ ನಿರಾಳ ಸಿಗಲಿದೆ ಮತ್ತು ಕಾವೇರಿ ನೀರನ್ನೇ ಕುಡಿಯಲು ಆಧಾರವಾಗಿಟ್ಟುಕೊಂಡಿರುವ ನಗರದ ಜನತೆಗೂ ಕೂಡ ನಿರಾಳ ಸಿಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಪ್ರತೀ ವರ್ಷದಂತೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ 735 ಮಿಮೀ ನಷ್ಟು ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಕೇವಲ 599 ಮಿಮೀ ನಷ್ಟು ಅಷ್ಟೇ ಮಳೆಯಾಗಿದೆ. ಮೈಸೂರು ಅಷ್ಟೇ ಅಲ್ಲದೆ, ಚಾಮರಾಜನಗರ, ಮಂಡ್ಯ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಕೊಡಗಿನಲ್ಲೂ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ಹೇಳಿದೆ.

ಈ ವರ್ಷ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ಮಾನ್ಸೂನ್ ಮಳೆಯಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ಅವರು ಹೇಳಿದ್ದಾರೆ.

ಅಕ್ಟೋಬರ್ ನಿಂದ ಡಿಸೆಂಬರ್ ಮಾನ್ಸೂನ್ ಮಳೆಯಾಗುವ ಅವಧಿಯಾಗಿದ್ದು, ಈ ಸಂದರ್ಭದಲ್ಲಿ ಈಶಾನ್ಯ ಮಾರುತಗಳನ್ನು ಅವಲಂಬಿಸಿ ಸಾಧಾರಣಾವಾಗಿ 150 ಮಿಮೀ ನಷ್ಟು ಮಳೆಯಾಗಬೇಕು. ಆದರೆ, ಈ ಅವಧಿಯಲ್ಲೇ ಹೊಡೆತ ಬಿದ್ದರೆ, ಮುಂದಿನ ದಿನಗಳಲ್ಲಿ ಬರುವ ಮಳೆಗೂ ಕೂಡ ಹೊಡೆತ ಬೀಳುತ್ತದೆ. ಇದರಿಂದ ರಾಜ್ಯದಲ್ಲಿ ನೀರಿನ ಸಮಸ್ಯೆ ಹಾಗೂ ರೈತರ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಲ್ ರಮೇಶ್ ಬಾಬು ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಬೀದರ್, ಕಲಬುರ್ಗಿ, ರಾಯಚೂರು ಹಾಗೂ ಇನ್ನಿತರೆ ಪ್ರದೇಶಗಳಲ್ಲಿ 7 ಸೆ.ಮೀ ನಷ್ಟು ಮಳೆಯಾಗಿರುವುದಾಗಿ ದಾಖಲಾಗಿದೆ. ಮುಂದಿನ 5 ದಿನಗಳ ಕಾಲ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ದಕ್ಷಿಣ ಭಾಗದಲ್ಲಿ ಅಂತಹ ಮಳೆಯಾಗುವ ಸೂಚನೆಗಳಾವುದೂ ಕಾಣುತ್ತಿಲ್ಲ. ಕರಾವಳಿ ತೀರ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಈ ಹಿಂದಿಗಿಂತಲೂ ಪ್ರಸ್ತುತ ವರ್ಷ ಅತ್ಯಂತ ಭೀಕರವಾಗಿದೆ. ಈ ವರ್ಷ ಅತ್ಯಂತ ಕಡಿಮೆ ಮಟ್ಟದಲ್ಲಿ ಮಳೆಯಾಗಿದೆ. ಮಲೆನಾಡಿನಲ್ಲಿ ಶೇ.29 ರಷ್ಟು ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ಕೇವಲ ಶೇ.22ರಷ್ಟು ಮಳೆಯಾಗಿದೆ ಎಂದು ಕೆಎಸ್ ಡಿಎಂಸಿ ಯೋಜನಾ ವಿಜ್ಞಾನಿ ಡಾ.ಸಿ.ಎನ್. ಪ್ರಭು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com