
ಬೆಂಗಳೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಕೈಕಾಲು ಕಟ್ಟಿ , ಚಾಕು ತೋರಿಸಿ ಲಕ್ಷಾಂತರ ರು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜಯನಗರ 8ನೇ ಬ್ಲಾಕ್ ನಲ್ಲಿ ನಡೆದಿದೆ.
ಜಯನಗರದ ವೈಷ್ಣವಿ ಬಿಲ್ಡಿಂಗ್ ನಲ್ಲಿದ್ದ ಪ್ರತಿಭಾ ಜೈನ್ ಎಂಬ 25 ವರ್ಷದ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.
ಪ್ರತಿಭಾ ಜೈನ್ ಇತ್ತೀಚೆಗಷ್ಟೇ ಈ ಮನೆಗೆ ತಮ್ಮ ಪೋಷಕರ ಜೊತೆ ತೆರಳಿದ್ದರು. ಅವರ ಪೋಷಕರು ಮೂರು ದಿನಗಳ ಹಿಂದೆ ವಿದೇಶಕ್ಕೆ ತೆರಳಿದ್ದ ಕಾರಣ ಮನೆಯಲ್ಲಿ ಪ್ರತಿಭಾ ಒಬ್ಬರೇ ಇದ್ದರು. ಪ್ರತಿಭಾ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಿನೇಶ್ ಎಂಬಾತ ಸೋಮವಾರ ರಾತ್ರಿ ಸುಮಾರು 9.45 ರ ಸುಮಾರಿಗೆ ಮನೆಗೆ ಬಂದಿದ್ದಾನೆ, ಮನೆಯಲ್ಲಿ ಏನೋ ಬೇಕಾಗಿದೆ ಎಂದು ಹೇಳಿ ಒಳಗೆ ಪ್ರವೇಶಿಸಿದ್ದಾನೆ. ಆತ ಒಳಗೆ ಬರುತ್ತಿದ್ದಂತೆ ಆತನ ಜೊತೆಗೆ ಒಳ ನುಗ್ಗಿದ ಇನ್ನಿಬ್ಬರು ಪ್ರತಿಭಾ ಕೈಕಾಲು ಕಟ್ಟಿದ್ದಾರೆ.ಟೇಪ್ ನಿಂದ ಆಕೆಯ ಬಾಯಿಯನ್ನು ಮುಚ್ಚಿ, ಚಾಕು ಹಿಡಿದು ಬೆದರಿಸಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಪ್ರತಿಭಾ ಅವರನ್ನು ಕೊಠಡಿಯೊಳಗೆ ಕೂಡಿ ಹಾಕಲಾಗಿತ್ತು, ಅವರು ಹೋದ ನಂತರ ಜೋರಾಗಿ ಕೂಗಿಕೊಂಡ ಪ್ರತಿಭಾ ಅಕ್ಕ ಪಕ್ಕದವರ ಸಹಾಯದಿಂದ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ದಿನೇಶ್ ಪ್ರತಿಭಾ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ, ಆರು ಫ್ಲಾಟ್ ಗಳಿರುವ ವೈಷ್ಣವಿ ಬಿಲ್ಡಿಂಗ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲ, ಜೊತೆಗೆ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಪಕ್ಕದ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
Advertisement