ಉಪ ಚುನಾವಣೆ: ಮತ ಚಲಾವಣೆ ಪ್ರಕ್ರಿಯೆ ಅಂತ್ಯ, ಬಹುತೇಕ ಶಾಂತಿಯುತ ಮತದಾನ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮೈಸೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.

ನಂಜನಗೂಡಿನಲ್ಲಿ ಸಂಜೆ 5ರ ವೇಳೆಗೆ ಶೇ 76.84ರಷ್ಟು ಮತ ಚಲಾವಣೆಯಾಗಿದ್ದರೆ, ಗುಂಡ್ಲುಪೇಟೆಯಲ್ಲಿ ಶೇ 78 ಮತ ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ. ಬಿಸಿಲಿನ ಬೇಗೆಯಿಂದಾಗಿ ಮತದಾನ ಪ್ರಕ್ರಿಯೆ ಮಧ್ಯಾಹ್ನ  ಮಂದಗತಿಯಲ್ಲಿ ಸಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೆ ಜನ ಸಾಲುಗಟ್ಟಿ ಮತಗಟ್ಟೆಗಳಲ್ಲಿ ನಿಂತು ಮತದಾನ ಮಾಡಿದರು. ಸಾಮಾನ್ಯ ಚುನಾವಣೆಗಳಲ್ಲಿ ನಡೆಯುವಂತೆಯೇ ಪ್ರಸ್ತುತ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ  ಕೆಲ ಅಹಿತಕರ ಘಟನೆಗಳು ನಡೆದಿದ್ದು, ಎರಡೂ ಕ್ಷೇತ್ರಗಳಲ್ಲಿ ಕೆಲವೆಡೆ ಕಾರ್ಯಕರ್ತರ ನಡುವೆ ಜಟಾಪಟಿ, ಗುಂಪು ಚದುರಿಸಲು ನಡೆದ ಲಘು ಲಾಠಿ ಪ್ರಹಾರ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಗುಂಡ್ಲುಪೇಟೆಯಲ್ಲಿ ಮತದಾನ ನಡೆಯುತ್ತಿದ್ದರೆ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ  ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಚುನಾವಣೆ ನಡೆದಿದೆ.

ಗುಂಡ್ಲುಪೇಟೆಯಲ್ಲಿ ಪತಿ ಮಹದೇವ್‌ ಪ್ರಸಾದ್‌ ಅವರ ಸಮಾಧಿಗೆ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರು ಮತ ಚಲಾಯಿಸಿದರು. ಅಂತೆಯೇ ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ  ಶ್ರೀನಿವಾಸ್‌ ಪ್ರಸಾದ್‌ ಮತ ಚಲಾಯಿಸಿದ್ದು, ಕಳಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತ ಚಲಾಯಿಸಿದರು. ನಂಜನಗೂಡಿನ ಮಹದೇವನಗರದಲ್ಲಿ ಮತದಾರರರು ಮತದಾನ ಬಹಿಷ್ಕರಿಸಿದ್ದರು, ಗುಂಡ್ಲುಪೇಟೆಯ ಕೆಲವೆಡೆ ಮತ  ಯಂತ್ರಗಳು ಕೈಕೊಟ್ಟು  ಮತದಾನ ವಿಳಂಳಬವಾದ ಪರಿಣಾಮ ಮತದಾನ ಸಮಯವನ್ನು ವಿಸ್ತರಿಸಲಾಗಿತ್ತು. ಏ.13ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಬಿಜೆಪಿ -ಕಾಂಗ್ರೆಸ್‌ ಘರ್ಷಣೆ
ಗುಂಡ್ಲುಪೇಟೆಯ ಬೇಳೂರಿನ ಮತಗಟ್ಟೆಯ ಬಳಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು ಕೈ-ಕೈ ಮಿಸಲಾಯಿಸಿದ ಬಗ್ಗೆ ವರದಿಯಾಗಿದೆ. ಸರ್ಕಾರಿ ಶಾಲೆಯ ಬಳಿ ಮತಗಟ್ಟೆಯಲ್ಲಿ ಕಾಂಗ್ರೆಸ್‌  -ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಾಗ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅರೆಸೇನಾ ಪಡೆಯ ಆರು ತುಕಡಿಗಳು ಸೇರಿದಂತೆ ಸುಮಾರು 2,000 ಪೊಲೀಸ್‌ ಸಿಬ್ಬಂದಿಯನ್ನು  ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಈ ಮಧ್ಯೆ, ಪಂಚರಾಜ್ಯಗಳ ಚುನಾವಣೆ ವೇಳೆ ಮತಯಂತ್ರಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಮತದಾನ ಆರಂಭಕ್ಕೂ ಮುನ್ನ, ಬೆಳಗ್ಗೆ 6 ಗಂಟೆಗೆ ಕಣದಲ್ಲಿರುವ ಅಭ್ಯರ್ಥಿಗಳು ಅಥವಾ ಅವರ  ಪರಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಯಿತು. ಅಂತೆಯೇ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ನಡೆಯುವ ಎಲ್ಲಾ ಸಂತೆ, ಜಾತ್ರೆ, ಉತ್ಸವ ಇತ್ಯಾದಿಗಳನ್ನು ಮುಂದೂಡಲಾಗಿತ್ತು. ಮಾಚ್ರವಲ್ಲದೇ ಉಭಯ ಕ್ಷೇತ್ರಗಳ  ವ್ಯಾಪ್ತಿಯಲ್ಲಿರುವ ಎಲ್ಲಾ ಕಾರ್ಖಾನೆಗಳು ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com