ರೀ ಬೋರ್ ಮಾಡುವಾಗ ದುರಂತ; ಕೊಳವೆ ಬಾವಿಗೆ ಬಿದ್ದ ಜಮೀನು ಮಾಲಿಕ ಮತ್ತು ಮೇಸ್ತ್ರಿ!

ಬತ್ತಿಹೋದ ಬೋರ್ ವೆಲ್ ರಿಪೇರಿ ಮಾಡುವಾಗ ಮಣ್ಣು ಕುಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಕೊಳವೆ ಬಾವಿಗೆ ಬಿದ್ದ ಘಟನೆ ಗದಗ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ಬತ್ತಿಹೋದ ಬೋರ್ ವೆಲ್ ರಿಪೇರಿ ಮಾಡುವಾಗ ಮಣ್ಣು ಕುಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಕೊಳವೆ ಬಾವಿಗೆ ಬಿದ್ದ ಘಟನೆ ಗದಗ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.

ಗದಗ ಜಿಲ್ಲೆಯಲ್ಲಿ ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿನ ಜಮೀನುವೊಂದರಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿ ಬತ್ತಿಹೋಗಿದ್ದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ರೀ ಬೋರಿಂಗ್ ಮಾಡುವ ಕಾರ್ಯ ನಡೆದಿತ್ತು. ಅದರಂತೆ  ಇಂದು ರೀ ಬೋರಿಂಗ್ ಕಾರ್ಯ ಮುಂದುವರೆಸುತ್ತಿದ್ದಾಗ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಬಸವರಾಜ್ ಮತ್ತು ಶಂಕರಪ್ಪ ಎಂಬ ಇಬ್ಬರು ಕೊಳವೆ ಬಾವಿಯೊಳಗೆ ಬಿದ್ದಿದ್ದಾರೆ. ಸ್ಥಳೀಯರು ತಿಳಿಸಿರುವಂತೆ ಕೊಳವೆ ಬಾವಿಯೊಳಗೆ  ಬಿದ್ದ ಶಂಕ್ರಪ್ಪನೇ ಜಮೀನಿನ ಮಾಲಿಕನಾಗಿದ್ದು, ಆತನೊಂದಿಗೆ ಮೇಸ್ತ್ರಿ ಬಸವರಾಜು ಎಂಬಾತ ಕೂಡ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ಇಬ್ಬರೂ ಸುಮಾರು 40 ಅಡಿ ಆಳಕ್ಕೆ ಬಿದ್ದಿದ್ದು, ಅವರ ಮೇಲೆ ಮಣ್ಣು ಕುಸಿದಿದೆ ಎಂದು ಹೇಳಿದ್ದಾರೆ.  ಈ ಹಿಂದೆ ಜಮೀನಿನಲ್ಲಿ 200 ಅಡಿ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ ಕಳೆದ ಕೆಲವು  ತಿಂಗಳ ಹಿಂದೆ ಕೊಳವೆ ಬಾವಿ ಬತ್ತಿ ಹೋಗಿತ್ತು. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ರೀ ಬೋರಿಂಗ್ ಮಾಡುವ ಕಾರ್ಯ ನಡೆದಿತ್ತು. ಕೊಳವೆ ಬಾವಿಯ ಕೇಸಿಂಗ್ ಪೈಪ್ ತೆಗೆಯುವ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರೂ  ಕೆಳಗೆ ಬಿದ್ದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆಯೇ ರೋಣ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಸ್ತುತ ಪೈಪ್ ಮೂಲಕ ಕೊಳವೆ ಬಾವಿಯೊಳಗೆ ಆಮ್ಲಜನಕ ಪೂರೈಕೆ  ಮಾಡಲಾಗುತ್ತಿದ್ದು, ಹಿಟಾಚಿ ಮೂಲಕ ಸಮೀಪದಲ್ಲೇ ರಂದ್ರ ತೋಡಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com