ಕೊಳವೆ ಬಾವಿಗೆ ಬಿದ್ದ ಕಾವೇರಿ: ಬಾಲಕಿ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ಬೆಳಗಾವಿಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಕಾವೇರಿಯನ್ನು ಮೇಲೆತ್ತಲು ಶನಿವಾರ ರಾತ್ರಿಯಿಂದ ನಡೆಯುತ್ತಿರುವ.....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಥಣಿ: ಬೆಳಗಾವಿಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಕಾವೇರಿಯನ್ನು ಮೇಲೆತ್ತಲು ಶನಿವಾರ ರಾತ್ರಿಯಿಂದ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾದ ಪರಿಣಾಮ ಸುರಂಗದ ಬದಲಾಗಿ ಬೋರ್ ವೆಲ್ ಕೊರೆಯಲು ಅಧಿಕಾರಿಗಳ ನಿರ್ಧರಿಸಿದ್ದಾರೆ.

ಬಾಲಕಿ ಕಾವೇರಿ ರಕ್ಷಣೆಗಾಗಿ ಎನ್.ಡಿ.ಆರ್.ಎಫ್, ಮರಾಠ ಪತಾಧಿ ದಳ, ಸಾಂಗ್ಲಿಯ ಹೆಲ್ಪ್ ಲೈನ್, ಅಗ್ನಿಶಾಮಕ ತಂಡ ಹಾಗೂ ಹಟ್ಟಿ ಚಿನ್ನದ ಗಣಿ ತಂಡದ ಸಿಬ್ಬಂದಿಗಳ ಅವಿರತ ಶ್ರಮ ಪಡುತ್ತಿದ್ದು, ಸುರಂಗ ತೋಡುವಾಗ ಬೃಹತ್  ಬಂಡೆ ತಡೆಯಾದ ಪರಿಣಾಮ ಸುರಂಗ ತೋಡುವ ಕಾರ್ಯ ಕೈಬಿಟ್ಟು, ಕೊಳವೆ ಬಾವಿ ಪಕ್ಕದಲ್ಲೇ ಬೋರ್ ವೆಲ್ ಕೊರೆಯಲಾಗುತ್ತಿದೆ. ಆ ಮೂಲಕ ಬಾಲಕಿಯನ್ನು ಮೇಲೆತ್ತಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಇದಕ್ಕೂ ಮೊದಲು ಕೊಳವೆ ಬಾವಿ ಮೂಲಕವೇ ಅಂದರೆ ಮೇಲ್ಮುಖವಾಗಿ ಬಾಲಕಿಯನ್ನು ಹಗ್ಗದ ಮೂಲಕ ಹುಕ್ ಬಳಸಿ ಮೇಲಕ್ಕೆ ಎತ್ತಲು ನಾಲ್ಕು ಬಾರಿ ಪ್ರಯತ್ನಿಸಲಾಯಿತು. ಆದರೆ ನಾಲ್ಕು ಬಾರಿಯೂ ವಿಫಲವಾದ ಪರಿಣಾಮ ಅದನ್ನು  ಕೈಬಿಡಲಾಯಿತು. ಮಗುವಿನ ಕೈಗಳು ಸಿಸಿ ಕ್ಯಾಮರಾದಲ್ಲಿ ಕಾಣಿಸುತ್ತಿದ್ದು, ಬಾಲಕಿ ಉಸಿರುಗಟ್ಟಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ ಬಾಲಕಿಯನ್ನು ಜೀವಂತವಾಗಿ  ಮೇಲೆತ್ತಲು ರಕ್ಷಣಾ ತಂಡ ಇನ್ನಿಲ್ಲತ ಪ್ರಯತ್ನ ನಡೆಸುತ್ತಿದೆ.

ಜಿಲ್ಲಾಧಿಕಾರಿ ಎಂ. ಜಯರಾಮ್ ಸೇರಿದಂತೆ, ಹಲವಾರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದು, ಸ್ಥಳಕ್ಕೆ ಶಾಸಕ ಲಕ್ಷ್ಮಣ್ ಸವದಿ ಕೂಡ ಭೇಟಿ ನೀಡಿ  ಬಾಲಕಿಯನ್ನು ಸುರಕ್ಷಿತವಾಗಿ ಮೇಲೆ ತರಲು ರಕ್ಷಣಾ ತಂಡಗಳಿಗೆ ಸೂಚಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ
ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿರುವ ಕಾವೇರಿಯ ತಂದೆ ಅಜಿತ ಮಾದರ, ತಾಯಿ ಸವಿತಾ ಆತಂಕಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿಯಿಂದಲೇ ಊಟ, ನಿದ್ರೆ ತ್ಯಜಿಸಿ ಮಗಳು ಬಿದ್ದ ಕೊಳವೆ ಬಾವಿ ಬಳಿ ಕುಳಿತಿರುವ ಇವರಿಬ್ಬರು  ಹೇಗಾದರೂ ಮಾಡಿ ನನ್ನ ಮಗಳನ್ನು ಬದುಕಿಸಿ ಕೊಡಿ ಎಂದು ಕಣ್ಣೀರು ಸುರಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಇದೇ ವೇಳೆ ಕಾವೇರಿ ತಾಯಿ ಅಸ್ವಸ್ಥಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾವೇರಿ ತಾಯಿ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಕಾವೇರಿಯ ಅಕ್ಕ ಅನ್ನಪೂರ್ಣಾ, ತಮ್ಮ ಪವನ ಕೂಡಾ ಸಹೋದರಿ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸಿರುವ ಕಾವೇರಿ ಬದುಕು ಬರಲಿ ಎಂದು ರಾಜ್ಯದ ವಿವಿಧೆಡೆ  ದೇವಸ್ಥಾನಗಳಲ್ಲಿ ಪ್ರಾರ್ಥನೆ, ಪೂಜೆಯನ್ನು ಸಾರ್ವಜನಿಕರು ಸಲ್ಲಿಸುತ್ತಿದ್ದಾರೆ.

ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ: ಸಿಎಂ ಸಿದ್ದರಾಮಯ್ಯ
ಇನ್ನು ಇದೇ ವೇಳೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಈ ಹಿಂದೆ ತೆರೆದ ಕೊಳವೆ ಬಾವಿ  ಮುಚ್ಚಲು ನಿರ್ದೇಶನ ನೀಡಲಾಗಿತ್ತು. ಹೀಗಿದ್ದೂ ಬೆಳಗಾವಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com