ಬೆಂಗಳೂರು: ಅಕ್ರಮವಾಗಿ ಆಧಾರ್ ಮಾಹಿತಿ ಪಡೆಯುತ್ತಿದ್ದ ಟೆಕ್ಕಿ ಬಂಧನ

ಅಕ್ರಮವಾಗಿ ಯುಐಡಿಎಐ ಸರ್ವರ್ ಮೂಲಕ ಆಧಾರ್ ಡಾಟಾ ಮಾಹಿತಿ ಪಡೆಯುತ್ತಿದ್ದ ಆರೋಪದ ಮೇಲೆ ಸಾಪ್ಟ್ ವೇರ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಕ್ರಮವಾಗಿ ಯುಐಡಿಎಐ ಸರ್ವರ್ ಮೂಲಕ ಆಧಾರ್ ಡಾಟಾ ಮಾಹಿತಿ ಪಡೆಯುತ್ತಿದ್ದ ಆರೋಪದ ಮೇಲೆ ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ಗುರುವಾರ ಬಂಧಿಸಿದ್ದಾರೆ.
ಫೋನ್ ಆಪ್ ಅಭಿವೃದ್ಧಿಗಾಗಿ ಒಲಾ ನಿಯೋಜಿಸಿಕೊಂಡಿದ್ದ ಟೆಕ್ಕಿ ಅಭಿನವ್ ಶ್ರೀವಾತ್ಸವ್ ಅವರ ವಿರುದ್ಧ ಒಂದು ವಾರದ ಹಿಂದೆಯೇ ಯುಐಡಿಎಐ ಉಪ ನಿರ್ದೇಶಕ ಅಶೋಕ್ ಲೆನಿನ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಅದನ್ನು ಜುಲೈ 26ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.
ಆರೋಪಿಯ ಬಂಧನಕ್ಕಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರು(ಅಪರಾಧ) ಆರು ತಂಡಗಳನ್ನು ರಚಿಸಿದ್ದರು. ನಗರ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಂಗಳವಾರ ಕೊರಮಂಗಲದಲ್ಲಿ ಆರೋಪಿ ಶ್ರೀವಾತ್ಸವ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಸಿಪಿಯು, ನಾಲ್ಕು ಲ್ಯಾಪ್ ಟಾಪ್, ಒಂದು ಟ್ಯಾಬ್ಲೆಟ್, ನಾಲ್ಕು ಮೊಬೈಲ್ ಫೋನ್, ಆರು ಪೆನ್ ಡ್ರೈವ್ ಸೇರಿದಂತೆ 2.25 ಲಕ್ಷ ರುಪಾಯಿ ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಪೊಲೀಸರು ಶ್ರೀವಾತ್ಸವ್ ರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಶ್ರೀವಾತ್ಸವ್ ಅವರು ಇ-ಕೆವೈಸಿ ಆಂಡ್ರಾಯ್ಡ್ ಆಪ್ ಮೂಲಕ ಆಧಾರ್ ಕಾರ್ಡ್ ಮಾಹಿತಿಯನ್ನ ಹ್ಯಾಕ್ ಮಾಡಿ ಜನರ ಗೌಪ್ಯ ಮಾಹಿತಿಯನ್ನ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com