ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಮೂರನೇ ದಿನವೂ ಮುಂದುವರೆದಿದ್ದು, ಈ ಮಧ್ಯ ಐಟಿ ದಾಳಿಯಿಂದ ಆಘಾತಕೊಳ್ಳಗಾಗಿರುವ ಸಚಿವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.
ಇಂದು ಬೆಳಗ್ಗೆ ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ವೈದ್ಯರ ತಂಡ ಭೇಟಿ ನೀಡಿದೆ. ಆದರೆ ಯಾರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲು ವೈದ್ಯರ ತಂಡ ಇಂಧನ ಸಚಿವರ ಮನೆಗ ಭೇಟಿ ನೀಡಿದೆ ಎಂಬುದರ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.
ಸದಾಶಿವನಗರದಲ್ಲಿ ಕ್ಲಿನಿಕ್ ಹೊಂದಿರುವ ಡಾ.ರಮಣ್ ರಾವ್ ನೇತೃತ್ವದ ಮೂವರು ವೈದ್ಯರ ತಂಡ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದೆ. ಮೂಲಗಳ ಪ್ರಕಾರ ಸಚಿವರ ಆರೋಗ್ಯ ಕೊಂಚ ಏರುಪೇರಾಗಿದ್ದು, ಬಿಪಿ ಹಾಗೂ ಡಯಾಬಿಟೀಸ್ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದಕ್ಕು ಮುನ್ನ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಮನೆ ಭೇಟಿ ನೀಡಿದ್ದರು. ಆದರೆ ಸಿಆರ್ ಪಿಎಫ್ ಸಿಬ್ಬಂದಿ ಅವರನ್ನು ಒಳಗೆ ಬಿಡಲಿಲ್ಲ. ಹೀಗಾಗಿ ವಾಪಸ್ ಹೋಗಿದ್ದಾರೆ.