ಹೇಮಾವತಿ ನದಿ ನೀರಿನಿಂದ ಹಾಸನದ ಕೆರೆಗಳು ಭರ್ತಿ!

ಹೇಮಾವತಿ ಜಲಾಶಯದಿಂದ ಆಗಸ್ಟ್ 6 ರಿಂದ 1 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ...
ಹೇಮಾವತಿ ಜಲಾಶಯ
ಹೇಮಾವತಿ ಜಲಾಶಯ
ಬೆಂಗಳೂರು: ಹೇಮಾವತಿ ಜಲಾಶಯದಿಂದ ಆಗಸ್ಟ್ 6 ರಿಂದ 1 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. 
ಪ್ರತಿದಿನ ಉನ್ನತ ಮಟ್ಟದ ಕಾಲುವೆಗಳ ಮೂಲಕ 10 ದಿನಗಳ ಕಾಲ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು, ಇದನ್ನು ಹಾಸನ ಜಿಲ್ಲೆಯ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡ ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನದಿಯಿಂದ ನೀರು ಬಿಡಬೇಕು, ಇಲ್ಲದಿದ್ದರೇ ಉಗ್ರ ಕ್ರಮ ಎದುರಿಸಬೇಕಾಗುವುದು ಎಂದು ಹೇಳಿದ್ದರು, ಕೂಡಲೇ ದೇವೇಗೌಡರಿಗೆ ಕರೆ ಮಾಡಿದ ಸಿಎಂ ನೀರು ಬಿಡುವುದಾಗಿ ಭರವಸೆ ನೀಡಿದ್ದರು. 
ಹೇಮಾವತಿ ನದಿಯಿಂದ ಬಿಡುಗಡೆಗೊಂಡ ನೀರು 94 ಕಿಮೀ ಹರಿಯಲಿದ್ದು, ಎಲ್ಲಾ ಕೆರೆಗಳು ಹಾಗೂ ಬಾವಿಗಳು ತುಂಬಲು ಸಹಾಯವಾಗುತ್ತದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ, ಎ. ಮಂಜು ಹೇಳಿದ್ದಾರೆ. ಜೊತೆಗೆ ಕೃಷಿಗಾಗಿ ನೀರು ಬಳಸಿಕೊಳ್ಳದಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ಆಗಸ್ಟ್ 14 ರಂದು ಮತ್ತೊಂದು ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ, ನಾಲ್ಕು ಜಲಾಶಯಗಳಿಂದ ಮುಂದಿನ ದಿನಗಳಲ್ಲಿ ನೀರು ಹರಿಸುವ ಸಂಬಂಧ ಚರ್ಚೆ ನಡೆಸಲಾಗುವುದು,  ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಆಗಸ್ಟ್ 14 ರ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿಗೆ ಪ್ರತಿದಿನ 7 ರಿಂದ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ, ಒಟ್ಟು 9 ಟಿಎಂಸಿ ನೀರನ್ನು ಇದುವರೆಗೂ ತಮಿಳುನಾಡಿಗೆ ಬಿಡಲಾಗಿದೆ. ಇದೇ ವೇಳೆ 20 ಟಿಎಂಸಿ ನೀರು ಕೊರತೆಯಾಗಿದ್ದು, ಇದೇ ವೇಳೆ ನಾವು ನೀರು ಬಿಡುಗಡೆ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ನಾಲ್ಕು ಜಲಾಶಯಗಳಿಂದ ಒಟ್ಟು 43 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ, ಕಳೆದ ವರ್ಷಕ್ಕಿಂತ ಈ ವರ್ಷ ಅತಿ ಕಡಿಮೆ ಸಂಗ್ರಹವಾಗಿದೆ. ಸಾಮಾನ್ಯ ಮಳೆ ಬಿದ್ದರೇ ನಮಗೆ 9-10 ಟಿಎಂಸಿ ನೀರು ಕೊರತೆಯಾಗುತ್ತದೆ. ನಾಲ್ಕು ಜಲಾಶಯಗಳಿಂದ ಒಟ್ಟು 122 ಟಿಎಂಸಿ ನೀರಿನ ಕೊರತೆಯಾಗುತ್ತದೆ ಎಂದು ಪಾಟೀಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com