ಭೂಗತ ಪಾತಕಿ ಹತ್ಯೆಗೆ ಸಂಚು ಶಂಕೆ: ಹಿಂಡಲಗಾ ಜೈಲಿನಲ್ಲಿ 400 ಪೊಲೀಸರಿಂದ ತೀವ್ರ ಶೋಧ

ಪ್ರಮುಖ ಬೆಳವಣಿಗೆಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸುಮಾರು 400 ಮಂದಿ ಪೊಲೀಸರು ಭಾನುವಾರ ದಿಢೀರ್ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಪ್ರಮುಖ ಬೆಳವಣಿಗೆಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಸುಮಾರು 400 ಮಂದಿ ಪೊಲೀಸರು ಭಾನುವಾರ ದಿಢೀರ್ ದಾಳಿ ಮಾಡಿ ಶೋಧ ನಡೆಸಿದ್ದಾರೆ.

ಮೂಲಗಳ ಪ್ರಕಾರ ಕುಖ್ಯಾತ ಭೂಗತ ಪಾತಕಿಯೊಬ್ಬನನ್ನು ಜೈಲಿನಲ್ಲೇ ಕೊಲೆಗೈಯ್ಯಲು ಸಂಚು ನಡೆಸಲಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಕೈದಿಗಳಿಂದ 2 ಮೊಬೈಲ್ ಹಾಗೂ 4 ಮೊಬಲ್  ಚಾರ್ಜರ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಂತೆಯೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಕೂಡ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಜೈಲಿನಲ್ಲಿ  ಗಾಂಜಾ ಸಾಗಾಟ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಸಹ ಕೈದಿಗಳು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ಟಿ.ಜಿ.ಕೃಷ್ಣಭಟ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ  ಭಾನುವಾರ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಕಮೀಷನರ್ ನೇತೃತ್ವದ ತಂಡದಲ್ಲಿ ಡಿಸಿಪಿಗಳಾದ ಸೀಮಾಲಾಟಕರ್, ಅಮರನಾಥರೆಡ್ಡಿ ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸ್  ಮೂಲಗಳು ತಿಳಿಸಿವೆ. ಅಂತೆಯೇ ಶ್ವಾನದಳದ ಮೂಲಕ ಜೈಲಿನಾದ್ಯಂತ ತೀವ್ರ ತಪಾಸಣೆ ನಡೆಸಲಾಯಿತು. ಕಳೆದ ಹಲವು ದಿನಗಳ ಹಿಂದೆ ಹಿಂಡಲಗಾ ಜೈಲಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ, ಮಾರಕಾಸ್ತ್ರಗಳು ಹಾಗೂ  ಮೊಬೈಲ್‍ ಗಳ ಬಳಕೆಯಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಜೈಲಿಗೆ ಭೇಟಿ ನೀಡಿದೆ.

ಭೂಗತ ಪಾತಕಿ ಬನ್ನಂಜೆ ರಾಜಾ ಹತ್ಯೆಗೆ ನಡೆದಿತ್ತೇ ಸಂಚು!

ಮತ್ತೊಂದು ಮೂಲದ ಪ್ರಕಾರ ಇದೇ ಹಿಂಡಲಗಾ ಜೈಲಿನಲ್ಲೇ ಭೂಗತ ಪಾತಕಿ ಬನ್ನಂಜೆ ರಾಜಾ ಕೂಡಜ ಬಂಧಿಯಾಗಿದ್ದು, ಅವನ ಹತ್ಯೆಗಾಗಿಯೇ ಸಂಚು ನಡೆದಿತ್ತೇ ಎಂಬ ಪ್ರಶ್ನೆ ಕೂಡ ಮೂಡತೊಡಗಿದೆ. ಪೊಲೀಸರು  ಹೇಳಿರುವಂತೆ ಭೂಗತ ಪಾತಕಿಯೊಬ್ಬನ ಕೊಲೆಗಾಗಿ ಸಂಚು ನಡೆಸಲಾಗಿದೆ ಎಂದು ತಿಳಿದಿದೆಯಾದರೂ ಆ ಭೂಗತ ಪಾತಕಿ ಯಾರು ಎಂಬುದನ್ನು ಮಾತ್ರ ಪೊಲೀಸರು ಎಲ್ಲಿಯೂ ಹೇಳಿಲ್ಲ. ಇನ್ನು ಜೈಲಿನಲ್ಲಿರುವ ಪ್ರಮುಖ ಭೂಗತ  ಪಾತಕಿ ಎಂದರೆ ಅದು ಅದು ಬನ್ನಂಜೆ ರಾಜಾ ಮಾತ್ರ. ಹೀಗಾಗಿ ಅತನ ವಿರುದ್ಧವೇ ಕೊಲೆ ಸಂಚು ನಡೆದಿರಬಹುದು ಎಂದು ಶಂಕಿಸಲಾಗಿದೆ.

ಈ ಪ್ರಕರಣದ ಬಳಿಕ ಜೈಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com