
ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಮೂರು ಗುಂಡುಗಳು ಹೊಕ್ಕಿವೆ ಎಂದು ತಿಳಿದುಬಂದಿದೆ.
ಗಾಯಾಳು ಬಾಗಪ್ಪ ಹರಿಜನನನ್ನು ಕೂಡಲವೇ ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ವಿವಿಧ ಪ್ರಕರಣಗಳ ಸಂಬಂಧ ಬಾಗಪ್ಪ ಹರಿಜನ ವಿಚಾರಣೆ ಎದುರಿಸುತ್ತಿದ್ದು, ಈ ಪೈಕಿ ಬಸವರಾಜ್ ಹರಿಜನ ಕೊಲೆ ಸಂಬಂಧ ವಿಚಾರಣೆಗಾಗಿ ಬಾಗಪ್ಪ ಹರಿಜನ ವಿಜಯಪುರ ಕೋರ್ಟ್ ಆವರಣಕ್ಕೆ ಬಂದಿದ್ದ. ಈ ವೇಳೆ ಬಾಗಪ್ಪ ಹರಿಜನ ಇನ್ನೇನು ಕೋರ್ಟ್ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಅಪಚಿತರ ವ್ಯಕ್ತಿಯೊಬ್ಬ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದಾನೆ. ಈ ಪೈಕಿ ಐದೂ ಗುಂಡುಗಳು ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಹೊಕ್ಕಿದ್ದು, ರಕ್ತಮಡುವಿನಲ್ಲಿ ಬಿದ್ದಿದ್ದ ಬಾಗಪ್ಪ ಹರಿಜನನನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಪ್ರಸ್ತುತ ವಿಜಯಪುರುದ ಜಲನಗರ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಾಗಪ್ಪ ಹರಿಜನ ಸ್ಥಿತಿ ಚಿಂತಾಜನಕ
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಲ್ ಡಿಇ ಆಸ್ಪತ್ರೆ ಸೂಪರಿಂಟೆಂಡ್ ಡಾ.ವಿಜಯ್ ಕುಮಾರ್ ಅವರು, ಬಾಗಪ್ಪ ಹರಿಜನ ಸ್ಥಿತಿ ಚಿಂತಾಜನಕವಾಗಿದೆ. ಎದೆ ಭಾಗದಲ್ಲಿ ಮೂರು ಮತ್ತು ಕರುಳು ಹಾಗೂ ಪಿತ್ತಕೋಶದ ಭಾಗದಲ್ಲಿ ಎರಡು ಗುಂಡುಗಳು ಹೊಕ್ಕಿವೆ. ಪ್ರಸ್ತುತ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಯಾರು, ಯಾತಕ್ಕಾಗಿ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ಮಾಡಿದ್ದಾರೆ ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಆದರೆ, ಕೆಲ ದಿನಗಳ ಹಿಂದೆ ಸಾಕ್ಷಿದಾರನಿಗೆ ಬೆದರಿಕೆ ಹಾಕಿರುವ ಬಗ್ಗೆ ಮಾಹಿತಿ ಇದೆ. ಇನ್ನು ಗುಂಡಿನ ದಾಳಿ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಯಾರೂ ಈ ಬಾಗಪ್ಪ ಹರಿಜನ?
ಭೀಮಾ ತೀರದ ಹಂತಕದ ಕುಖ್ಯಾತಿಯಲ್ಲಿ ಬಾಗಪ್ಪ ಹರಿಜನ ಕೂಡ ಒಬ್ಬ. ಈ ಹಿಂದೆ ಇಡೀ ಭೀಮಾತೀರವನ್ನು ನಡುಗಿಸಿದ್ದ ಚಂದಪ್ಪ ಹರಿಜನನ ಸಹೋದರ ಸಂಬಂಧಿ ಕೂಡ ಆಗಿರುವ ಬಾಗಪ್ಪ ಹರಿಜನ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ. ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪ ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆಲಮೇಲ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್ ಕಂಡಕ್ಟರ್ ಲಾಳಸಂಗಿ ಎಂಬುವರ ಕೊಲೆ ಪ್ರಕರಣದಲ್ಲಿ ಬಾಗಪ್ಪ ಪ್ರಮುಖ ಪಾತ್ರಧಾರಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಳೆದ ತಿಂಗಳಷ್ಟೇ ಬಾಗಪ್ಪ ಜೈಲಿಂದ ಹೊರಬಂದಿದ್ದ. ಸೋದರ ಸಂಬಂಧಿಗಳ ಕೊಲೆ ಪ್ರಕರಣ ಸಂಬಂಧ ಎರಡನೇ ವಿಚಾರಣೆಗಾಗಿ ಇಂದು ಕೋರ್ಟ್ಗೆ ಹಾಜರಾಗಲು ಏಕಾಂಗಿಯಾಗಿ ಬರುತ್ತಿದ್ದ ವೇಳೆ ಬಾಗಪ್ಪನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ.
Advertisement