ಸಂಸದ ಡಿ.ಕೆ ಸುರೇಶ್ ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ

ಸಂಸದ ಡಿ.ಕೆ.ಸುರೇಶ್‍ ಅವರ ಕಚೇರಿ ದೂರವಾಣಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ರವಿಪೂಜಾರಿ ...
ಡಿ.ಕೆ ಸುರೇಶ್
ಡಿ.ಕೆ ಸುರೇಶ್
ಬೆಂಗಳೂರು: ಸಂಸದ ಡಿ.ಕೆ.ಸುರೇಶ್‍ ಅವರ ಕಚೇರಿ ದೂರವಾಣಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ರವಿಪೂಜಾರಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಮೂರುದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ 7 ಗಂಟೆಗಳ ನಂತರ ವ್ಯಕ್ತಿಯೊಬ್ಬ ಸಚಿವರ ಸಹೋದರ ಸುರೇಶ್ ಅವರ ಕಚೇರಿಗೆ ಕರೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಸುರೇಶ್ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ಅವರ ಸಹಾಯಕ ಅರುಣ್‌ದೇವ್ ಕರೆ ಸ್ವೀಕರಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿರುವ ಆರೋಪಿ, ‘ನಾನು ರವಿಪೂಜಾರಿ. ಹಣಕ್ಕಾಗಿ ಕರೆ ಮಾಡಿದ್ದೇನೆ’ ಎಂದಿದ್ದಾನೆ. 
ಕರೆ ಬಂದ ಸಂಖ್ಯೆಯ ಮೂಲ ಪತ್ತೆಗೆ ಸದಾಶಿವನಗರ ಪೊಲೀಸರು ಸೈಬರ್ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸಿಡಿಆರ್ ಪರಿಶೀಲಿಸಿದಾಗ ಆರೋಪಿ 14 ಸಂಖ್ಯೆಗಳನ್ನು ಬಳಸಿ ಕರೆ ಮಾಡಿರುವುದು ಗೊತ್ತಾಗಿದೆ. ಬಹುಶಃ ಅದು ‘ಇಂಟರ್‌ನೆಟ್ ಕಾಲ್’ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.‌
ರವಿಪೂಜಾರಿ ಎಂದು ಹೇಳಿಕೊಂಡ ಆ ವ್ಯಕ್ತಿ, ಸುರೇಶ್ ಎಲ್ಲಿ ಎಂದು ವಿಚಾರಿಸಿದ್ದಾನೆ. ಆಗ ಅವರು ಈಗಲ್‌ಟನ್‌ ರೆಸಾರ್ಟ್‌ನಲ್ಲಿದ್ದ ಕಾರಣ ಅರುಣ್‌ದೇವ್ ಅವರು ಸಂಸದರ ಆಪ್ತ ಸಹಾಯಕ ವಿನಯ್ ಮೊಬೈಲ್ ನಂಬರ್ ನೀಡಿದ್ದಾರೆ. ಅದೊಂದು ಹುಸಿ ಕರೆಯೂ ಇರಬಹುದು. ರವಿಪೂಜಾರಿ ಹೆಸರಿನಲ್ಲಿ ಕರೆ ಬಂದಿದ್ದರಿಂದ ಆತನ ವಿರುದ್ಧವೇ ಸುಲಿಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ನಗರದ ಸುಮಾರು 20 ಮಂದಿಗೆ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿವೆ.ಸಾಮಾನ್ಯವಾಗಿ ಉದ್ಯಮಿಗಳು ಹಾಗೂ ಬಿಲ್ಡರ್ಸ್ ಗಳಿಗೆ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com