ತಮಿಳು ನಾಡಿನ ಯುವಕನನ್ನು ಬೆಂಗಳೂರಿನಲ್ಲಿ ಕುಟುಂಬ ಜೊತೆ ಒಗ್ಗೂಡಿಸಿದ ಆಧಾರ್ ಕಾರ್ಡು

ನಾಲ್ಕು ವರ್ಷಗಳ ನಂತರ ತನ್ನ 20 ವರ್ಷದ ಮಗ ಕಾರ್ತಿ ಪಿ. ಪಿಚಂಡಿಯನ್ನು ಭೇಟಿ ಮಾಡಿದ ತಂದೆ...
ಬೆಂಗಳೂರಿನಲ್ಲಿ ತನ್ನ ತಂದೆ ಜೆ.ಪಿಚಂಡಿ ಕಾರ್ತಿಕ್ ಜೊತೆ ಮಂಜು.
ಬೆಂಗಳೂರಿನಲ್ಲಿ ತನ್ನ ತಂದೆ ಜೆ.ಪಿಚಂಡಿ ಕಾರ್ತಿಕ್ ಜೊತೆ ಮಂಜು.
Updated on
ಬೆಂಗಳೂರು: ನಾಲ್ಕು ವರ್ಷಗಳ ನಂತರ ತನ್ನ 20 ವರ್ಷದ ಮಗ ಕಾರ್ತಿ ಪಿ. ಪಿಚಂಡಿಯನ್ನು ಭೇಟಿ ಮಾಡಿದ ತಂದೆ ಪಿಚಂಡಿ ಜೆ.ಜಯರಾಮ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದು ಸಾಧ್ಯವಾಗಿದ್ದು ಆಧಾರ್ ಕಾರ್ಡು ಮೂಲಕ. 
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಸ್ಥಳೀಯ ಬೆಂಗಳೂರು ಕಚೇರಿ ಹೊಸೂರು ರಸ್ತೆಯಲ್ಲಿರುವ ಮಾನಸಿಕ ವಿಕಲಾಂಗ ಬಾಲಕರ ವಸತಿಗೃಹದಲ್ಲಿ ನೋಂದಣಿ ಕಾರ್ಯ ಹಮ್ಮಿಕೊಂಡಿತ್ತು. ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ತಿ ವಾಸಿಸುತ್ತಿದ್ದ. ಆತನ ಬಯೊಮೆಟ್ರಿಕ್ಸ್ ಈಗಾಗಲೇ ಇರುವುದು ಆಧಾರ್ ನೋಂದಣಿ ಅಧಿಕಾರಿಗಳಿಗೆ ಗೊತ್ತಾಗಿತ್ತು. ಆತನ ಪೋಷಕರು ನೋಂದಣಿ ಕಚೇರಿಯನ್ನು ಸಂಪರ್ಕಿಸಿದರು ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಗೆ ಕೂಡ ಮಾಹಿತಿ ನೀಡಲಾಗಿತ್ತು.
 ಕಾರ್ತಿ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಚಂದತೂರು ಗ್ರಾಮದವನು. 2013, ಸೆಪ್ಟೆಂಬರ್ 2ರಂದು ತನ್ನ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಮನೆಯಲ್ಲಿ ಹೇಳದೆಯೇ ರೈಲಿಗೆ ಹತ್ತಿ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದ. ಆತನ ತಂದೆ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಗ ಮನೆ ಬಿಟ್ಟು ಹೋದವನು ಸಿಕ್ಕಿರಲಿಲ್ಲ. ತಮಿಳುನಾಡಿನ ಎಲ್ಲಾ ಕಡೆ ಹುಡುಕಿದ್ದರು.
ಆನಂದಭಾಷ್ಪದಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಪಿಚಂಡಿ, ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈತ ನನ್ನ ಹಿರಿಯ ಮಗ. ಆತ ಮನೆ ಬಿಟ್ಟು ಹೋದ ನಂತರ ಪ್ರತಿನಿತ್ಯ ನಮಗೆ ಆತನನ್ನು ಹುಡುಕುವುದೇ ಕೆಲಸವಾಗಿಬಿಟ್ಟಿತ್ತು. ವೆಲ್ಲೂರು, ಚೆನ್ನೈ, ವನಿಯಂಬಾಡಿ, ತಿರುಪಟ್ಟೂರು, ಚಿತ್ತೂರು ಮತ್ತು ಅರಕ್ಕೊನಮ್ ನಲ್ಲಿ ಹುಡುಕಿದೆವು. ಆತ ಬೆಂಗಳೂರಿಗೆ ಬಂದಿರಬಹುದು ಎಂದು ನಮಗೆ ಯೋಚನೆಯಾಗಲಿಲ್ಲ.
ಪಿಚಂಡಿಯವರ ಹೆಣ್ಣು ಮಕ್ಕಳು ಪೂರ್ಣಿಮಾ ಮತ್ತು ಶರಣ್ಯ ಅನಂತಪುರ ಮತ್ತು ತಿರುಪಟ್ಟೂರಿನಲ್ಲಿ ಓದುತ್ತಿದ್ದರೆ ಕಾರ್ತಿ ಮತ್ತು ಆತನ ತಾಯಿ ಬಾನು ಎಂ. ಮುರುಗೇಶನ್ ಊರಿನಲ್ಲಿಯೇ ಉಳಿದುಕೊಂಡಿದ್ದರು.
ಬಾನು ಆತನನ್ನು ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಆದರೂ ಒಂದು ದಿನ ಆತ ಮನೆ ಬಿಟ್ಟು ಬರುವಲ್ಲಿ ಯಶಸ್ವಿಯಾದನು. ಇದೀಗ ಅವನು ಸಿಕ್ಕಿರುವುದು ನಮಗೆಲ್ಲರಿಗೂ, ನನ್ನ ಹೆಣ್ಣು ಮಕ್ಕಳಿಗೆ ಕೂಡ ಖುಷಿಯಾಗಿದೆ ಎನ್ನುತ್ತಾರೆ ತಂದೆ ಪಿಚಂಡಿ.
ಈತ ಮಕ್ಕಳ ಸಹಾಯವಾಣಿ ಕಾರ್ಯಕರ್ತರಿಗೆ 2013ರಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದನು. ಅಲ್ಲಿಂದ ಇಲ್ಲಿಗೆ ಕರೆದುಕೊಂಡು ಬಂದರು ಎನ್ನುತ್ತಾರೆ ಸರ್ಕಾರಿ ಮಾನಸಿಕ ನ್ಯೂನತೆ ಬಾಲಕರ ಕೇಂದ್ರದ ಸೂಪರಿಂಟೆಂಡೆಂಟ್ ನಾಗರತ್ನಮ್ಮ ಕೆ.
ಹೀಗೆ ಆಧಾರ್ ಕಾರ್ಡು ಮೂಲಕ ತಪ್ಪಿಸಿಕೊಂಡವರು, ಕಾಣೆಯಾದವರು ಮತ್ತೆ ಕುಟುಂಬದೊಂದಿಗೆ ಒಂದಾಗುತ್ತಿರುವುದು ಇದು ಮೊದಲ ಪ್ರಕರಣವಲ್ಲ. ಹೀಗೆ 10 ಮಂದಿ ಮಕ್ಕಳು ಆಧಾರ್ ಕಾರ್ಡು ಮೂಲಕ   ಮತ್ತೆ ಒಟ್ಟು ಸೇರಿದ್ದಾರೆ ಎನ್ನುತ್ತಾರೆ ನಾಗರತ್ನಮ್ಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com