ಬೆಂಗಳೂರು: ಮಳೆನೀರಿನಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಪರಿಶೀಲಿಸಿದರು.ಈ ವೇಳೆ ಸ್ಥಳೀಯ ನಿವಾಸಿಗಳು ದೂರುಗಳ ಸರಮಾಲೆಯನ್ನು ಸುರಿಸಿದರು, ಕೆಲ ನಿವಾಸಿಗಳು ಸಚಿವರು ಹಾಗೂ ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ರಾಮಲಿಂಗಾರೆಡ್ಡಿ, ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳ ತಂಡ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿತ್ತು. ಜೆ.ಸಿ ರಸ್ತೆ, ಆಡುಗೋಡಿ, ಡಬಲ್ ರೋಡ್, ಸರಸ್ವತಿ ಪುರಂ ಆನೇಪಾಳ್ಯ ಸೇರಿದಂತೆ ಹಲವೆಡೆ ಪರಿಶೀಲನೆ ನಡೆಸಲಾಯಿತು.
ಶಾಂತಿನಗರದಲ್ಲಿ ಮಾತನಾಡಿದ ಜಾರ್ಜ್ ಮಳೆ ನೀರಿನ ಬೃಹತ್ ಕಾಲುವೆಗಳ ಪುನಶ್ಚೇತನ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಚಿವರ ಮಾತಿಗೆ ಅಡ್ಡ ಬಂದ ನಿವಾಸಿಯೊಬ್ಬರು ರಾಜಕಾಲುವೆ ಕಾಮಗಾರಿಗಳು ತುಂಬಾ ನಿಧಾನವಾಗಿ ನಡೆಯುತ್ತಿದ್ದು, ಪಾಲಿಕೆ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದೆ. ಇಲ್ಲಿನ ನಿವಾಸಿಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ಜಾರ್ಜ್ ಗೆ ಹೇಳಿದರು.
ಆನೆ ಪಾಳ್ಯ, ಎಸ್ ಟಿ ಬೆಡ್ ಪ್ರದೇಶಗಳಲ್ಲಿ ಭೇಟಿ ನೀಡಿಲು ಬಂದಿದ್ದ ತಂಡದ ವಿರುದ್ಧ ಗೃಹಿಣಿಯರು ಆಕ್ರೋಶ ವ್ಯಕ್ತ ಪಡಿಸಿದರು. ನಿಮ್ಮ ನಿರ್ಲಕ್ಷ್ಯದಿಂದಾಗಿ ಮಳೆ ನೀರಿನ ಜೊತೆ ಚರಂಡಿ ನೀರು ಮನೆ ಸೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾಗಿ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನಿವಾಸಿಗಳ ದೂರುಗಳನ್ನು ಆಲಿಸಿದ ಜಾರ್ಜ್ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಎಸ್.ಟಿ.ಬೆಡ್ ಪ್ರದೇಶದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗಿದ್ದು, ಇನ್ನು 10 ದಿನಗಳಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ರಾಜಕಾಲುವೆ ಒತ್ತುವರಿಯಿಂದಾಗಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಈಗಾಗಲೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗಿದ್ದು, ನೂರು ಕಿ.ಮೀ.ಗೂ ಉದ್ದದ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.