ಬೆಂಗಳೂರು: ಕಾಂಗ್ರೆಸ್ ನ ಬಿಬಿಎಂಪಿ ಕಾರ್ಪೋರೇಟರ್ ಸೇರಿ ಐವರ ಹೆಸರು ಬರೆದಿಟ್ಟು ಬೆಂಗಳೂರಿನ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ದೊಡ್ಡಮಾವಳ್ಳಿಯಲ್ಲಿ ನೆಲೆಸಿರುವ 47 ವರ್ಷದ ನಂಜುಂಡಸ್ವಾಮಿ ಮತ್ತು ಪತ್ನಿ 41 ವರ್ಷದ ಪುಷ್ಪಲತಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂಜುಂಡಸ್ವಾಮಿ ಅವರು ಕಲಾಸಿಪಾಳ್ಯದಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ನಂಜುಂಡಸ್ವಾಮಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಚಂದನ್ ಎಂಬುವರು ನೆಲ ಮಹಡಿಯಲ್ಲಿ ವಾಸವಾಗಿದ್ದು ತಂದೆ-ತಾಯಿ ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ 8:30ರ ಸುಮಾರಿಗೆ ಊಟಕ್ಕೆ ಕರೆಯಲೆಂದು ಚಂದನ್ ಮೊದಲ ಮಹಡಿಗೆ ತೆರಳಿದಾಗ ನಂಜುಂಡಸ್ವಾಮಿ ಮತ್ತು ಪುಷ್ಪಲತಾ ಅವರು ನೇಣು ಬಿಗಿದುಕೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ದಂಪತಿಗಳು ಬರೆದಿರುವ ಡೆಟ್ ನೋಟ್ ಸಿಕ್ಕಿದ್ದು ಅದರಲ್ಲಿ ಹೆಮ್ಮಿಗೆಪುರಾದ ಕಾಂಗ್ರೆಸ್ ಕಾರ್ಪೋರೇಟರ್ ಆರ್ಯ ಶ್ರೀನಿವಾಸ್, ಎಜಿ ಕೃಷ್ಣ, ದೇವೇಗೌಡ, ಲಕ್ಷ್ಮೀ ನಾರಾಯಣ ಮತ್ತು ಆತನ ಪತ್ನಿ ತೇಜಸ್ವಿನಿ ಲಕ್ಷ್ಮೀ ನಾರಾಯಣ ಅವರ ಹೆಸರು ಬರೆದಿಡಲಾಗಿದೆ.
ಇವರೆಲ್ಲಾ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು ಹೋಟೆಲ್ ಉದ್ಯಮ ನಡೆಸುತ್ತಿದ್ದ ನಂಜುಂಡಸ್ವಾಮಿ ಅವರು ಅವರಿಂದ ಹೆಚ್ಚು ಬಡ್ಡಿಗೆ ಸಾಲ ಪಡೆದಿದ್ದರು. ಸಾಲದ ಹಣ ತೀರಿಸದಿದ್ದಾಗ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಇದರಿಂದ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.