ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿಗೆ ಸೂಚಸಿದ್ದು, ಅಂತಿಮ ಘಟ್ಟ ತಲುಪಿದೆ ಎಂದು ಹೇಳಿದ್ದಾರೆ.
ಆಗಸ್ಟ್ 30ಕ್ಕೆ ಕರಣ ನಡೆದು 2 ವರ್ಷ ಕಳೆಯುತ್ತದೆ. ಇದುವರೆಗೂ ಆರೋಪಿಗಳ ಪತ್ತೆಯಾಗದಿರುವುದಕ್ಕೆ ರಾಜ್ಯವ್ಯಾಪಿ ನಾನಾ ರೀತಿಯ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ನಿರ್ದೇಶಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಕರಣದ ತನಿಖೆಯು ಅಂತಿಮ ಹಂತದಲ್ಲಿದ್ದು, ಕ್ಷಿಪ್ರ ಗತಿಯಲ್ಲಿ ತನಿಖೆ ನಡೆಯುತ್ತಿದ್ದು. ಶೀಘ್ರದಲ್ಲೇ ಆರೋಪಿಗಳ ಬಂಧನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ ತನಿಖಾ ತಂಡದ ಜತೆ ಕರ್ನಾಟಕ ತನಿಖಾ ತಂಡ ಚರ್ಚಿಸಿ, ಮತ್ತಷ್ಟು ಸಹಕಾರ ಹೆಚ್ಚಿಸಿಕೊಳ್ಳುವಂತೆ, ಹಾಗೂ ಎಲ್ಲಾ ದೃಷ್ಟಿ ಕೋನಗಳಿಂದ ಪರಿಶೀಲಿಸಬೇಕೆಂದು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ತನಿಖಾ ತಂಡ ಸಂಗ್ರಹಿಸಿರುವ ಮಾಹಿತಿ ವಿಶ್ಲೇಷಿಸಿ, ಮಹಾರಾಷ್ಟ್ರ ಮಾದರಿಯಲ್ಲಿ ನಡೆದಿರುವ ಡಾ. ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ತಂಡಗಳೊಂದಿಗೆ ರಾಜ್ಯದ ತನಿಖಾ ತಂಡವು ನಿರಂತರ ಸಂಪರ್ಕದಲ್ಲಿದೆ ಎಂದು ಸಿಎಂ ಹೇಳಿದ್ದಾರೆ.