ರಾಜ್ಯ
ರಂಗನತಿಟ್ಟಿನಲ್ಲಿ ಅಕ್ರಮ ಮೀನುಗಾರಿಗೆ: ಓರ್ವ ಆರೋಪಿ ಬಂಧನ
ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ...
ಮೈಸೂರು: ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಶ್ರೀರಂಗಪಟ್ಟಣದ ನಾರ್ಥ್ ಬ್ಯಾಂಕ್ ನಿವಾಸಿಯಾಗಿರುವ ಜಾಫರ್ (25) ಬಂಧಿತ ಆರೋಪಿ ಎಂದು ಗುರ್ತಿಸಲಾಗಿದೆ.
7 ಮಂದಿಯಿದ್ದ ಆರೋಪಿಗಳು ಪೊಲೀಸರು ದಾಳಿ ನಡೆಸುತ್ತಿದ್ದ ವೇಳೆ ಪರಾರಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಆರೋಪಿಗಳು ರಂಗನತಿಟ್ಟು ಪಕ್ಷಿಧಾಮದ ಕೆರೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು. ಪೊಲೀಸರು ದಾಳಿ ನಡೆಸುತ್ತಿದ್ದಂತೆ 6 ಮಂದಿ ಪರಾರಿಯಾಗಿದ್ದಾರೆ.
ಬಳಿಕ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗುತ್ತಿದ್ದ 1 ಆಟೋ, 3 ದ್ವಿಚಕ್ರ ವಾಹನ ಮತ್ತು 5 ಬಲೆಗಳು ಹಾಗೂ 5 ತೆಪ್ಪಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧನದ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಪರಾರಿಯಾಗುವ ಪ್ರಯತ್ನದಲ್ಲಿದ್ದ ಆರೋಪಿ ಸಿಬ್ಬಂದಿ ಮುರುಗ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಬಳಿಕ ಆಸ್ಪತ್ರೆಗೆ ದಾಖಲಿಸಿ ಸಿಬ್ಬಂದಿಗೆ ಚಿಕಿತ್ಸೆಕೊಡಿಸಲಾಯಿತು. ಇದೀಗ ಮುರುಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.