ಹಾಡಹಗಲೇ ಇಂಜಿನಿಯರ್'ನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಹಾಡಹಗಲೇ ಎಲೆಕ್ಟ್ರಿಕಲ್ ಇಂಜಿನಿಯರ್ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೊಂದು ಕೆಂದ್ರಾಪರ ಟೌನ್ ಪೊಲೀಸ್ ಠಾಣಾ ವಾಪ್ತಿಯಲ್ಲಿ ಬರುವ ಚಕಾಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೆಂದ್ರಾಪರ: ಹಾಡಹಗಲೇ ಎಲೆಕ್ಟ್ರಿಕಲ್ ಇಂಜಿನಿಯರ್ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆಯೊಂದು ಕೆಂದ್ರಾಪರ ಟೌನ್ ಪೊಲೀಸ್ ಠಾಣಾ ವಾಪ್ತಿಯಲ್ಲಿ ಬರುವ ಚಕಾಡ ಗ್ರಾಮದಲ್ಲಿ ಗುರುವಾರ ನಡೆದಿದೆ. 
ದೆಬಾಶಿಸ್ ಸಾಹು (28) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಗುಪ್ತಾ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಲ್ಲಿ ಸಾಹು ಅವರು ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ಜಿಲ್ಲೆಯಲ್ಲಿ 33ಕೆ.ವಿ/11 ಕೆವಿ ವಿದ್ಯುತ್ ಕಟ್ಟಡ ನಿರ್ಮಿಸುವಂತೆ ಕಂಪನಿಗೆ ವಹಿಸಿತ್ತು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸಾಹು ಅವರು ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಸಾಹು ಅವರು ಕೆಲಸಗಾರರೊಂದಿಗೆ ಮಾತನಾಡುತ್ತ ಕಟ್ಟಡದಿಂದ ಹೊರಬರುತ್ತಿದ್ದಂತೆಯೇ ದುಷ್ಕರ್ಮಿಗಳು ಏಕಾಏಕಿ ಸಾಹು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಬೈಕ್ ನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. 
ಸಾಹು ಅವರ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗುಂಡು ತಗುಲಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಸಾಹು ಅವರನ್ನು ಎಸ್'ಸಿಬಿ ವೈದ್ಯಕೀಯ ಕಾಲೇದು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾಹು ಅವರು ಸಾವನ್ನಪ್ಪಿದ್ದಾರೆ. 
ಘಟನೆ ಬಳಿಕ ಶ್ವಾನಗಳೊಂದಿಗೆ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತ್ತಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. 
ಪ್ರಕರಣದ ಬಳಿಕ ಜಿಲ್ಲೆಯನ್ನು ಪ್ರವೇಶ ಮಾಡುವ ಹಾಗೂ ಹೊರಹೋಗುವ ಪ್ರತಿಯೊಂದು ಭಾಗವನ್ನು ಬಂದ್ ಮಾಡಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ಈಗಾಗಲೇ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಸುಲಿಗೆ ಹಣ ನೀಡಲು ನಿರಾಕರಿಸಿರುವುದೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com