ಮಹದಾಯಿ ವಿವಾದ: ರಾಜ್ಯದ ಹಲವೆಡೆ ಪ್ರತಿಭಟನೆ; ಬಿಜೆಪಿ ನಾಯಕರ ಪ್ರತಿಕೃತಿ ದಹನ

ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟದ ಕಿಚ್ಚು ಇದೀಗ ರಾಜ್ಯದ ಹಲವೆಡೆ ವ್ಯಾಪಿಸಿದೆ.
ಪ್ರತಿಭಟನೆ
ಪ್ರತಿಭಟನೆ
ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟದ ಕಿಚ್ಚು ಇದೀಗ ರಾಜ್ಯದ ಹಲವೆಡೆ ವ್ಯಾಪಿಸಿದೆ. 
ಈ ಸಂಬಂಧ ಹಲವು ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಪ್ರತಿಭಟನೆಗೆ ರೈತ ಪರ ಸಂಘಟನೆ ಸೇರಿದಂತೆ ಹಲವು ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಕಾವು ರಾಜ್ಯಾದ್ಯಂತ ವ್ಯಾಪಿಸಿದೆ. ಮಹದಾಯಿ ನೀರಿಗೆ ಆಗ್ರಹಿಸಿ ಐದು ದಿನದಿಂದ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರು ರಾಜಭವಕ್ಕೆ ತೆರಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ನೇತೃತ್ವದ ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯತ್ತ ಮೆರವಣಿಗೆ ಹೊರಟಿದ್ದು ಇವರನ್ನು ಪೊಲೀಸರು ಮರ್ಗಮಧ್ಯೆಯೇ ತಡೆದರು. ಇದರಿಂದಾಗಿ ಕೆಪಿಸಿಸಿ ಕಚೇರಿಗೆ ತಲುಪುವ ಮಾರ್ಗ ಮಧ್ಯೆ ಮುಖಂಡರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸಂಸದ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರತಿಭಟನಾಕಾರರು ನಗರದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಿಕಿ ನಡೆಯಿತು. ಕೊನೆಗೆ ಕೆಲವು ಕಾರ್ಯಕರ್ತರು ಬ್ಲೇಡ್ ನಿಂದ ಕೈ ಕೊಯ್ದುಕೊಂಡು ರಕ್ತ ಚೆಲ್ಲಿದರು ಸರಿ ಹೋರಾಟ ನಿಲ್ಲಿಸಲ್ಲ ಎಂದು ಘೋಷಣೆಗಳನ್ನು ಕೂಗಿದರು. ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. 
ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್ ಸಂಪೂರ್ಣ ಯಶಸ್ವಿ
ಮಹದಾಯಿ ನದಿ ನೀರಿಗಾಗಿ ಆಗ್ರಹಿಸಿ ರೈತ ಪರ ಸಂಘಟನೆಗಳು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಮಲಪ್ರಭ ಪ್ರಾಂತ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಹುಬ್ಬಳ್ಳಿ, ಧಾರವಾಡದಲ್ಲಿ ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ಧಾರವಾಡದಲ್ಲೂ ಹಲವು ರೈತರಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಬಂದ್ ಗೆ ಕೈ ಜೋಡಿಸಿವೆ. ಅವಳಿ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಹಲವೆಡೆ ಪ್ರತಿಭಟನಾ ನಿರತರು ಟೈರ್ ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಗಳು ದಾಖಲಾಗಿವೆ. ಇನ್ನು ಧಾರವಾಡದಲ್ಲಿ 9 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಹುಬ್ಬಳ್ಳಿಯಲ್ಲಿ ರೈಲ್ ರೋಕೋ ಚಳುವಳಿ ನಡೆಸಿದ ಸುಮಾರು 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಜಿ ಸಿಎಂ ಬಿಎಸ್ ವೈ ಅಣುಕು ಶವಯಾತ್ರೆ
ಏತನ್ಮಧ್ಯೆ ಪ್ರತಿಭಟನಾನಿರತರು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಥ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅವರ ಅಣುಕು ಶವಯಾತ್ರೆ ಕೂಡ ನಡೆಸಿದರು. ಈ ಹಿಂದೆ ಯಡಿಯೂರಪ್ಪ ಅವರು ಶತಾಯಗತಾಯ ಮಹದಾಯಿ ನದಿ ವಿವಾದ ಪರಿಹರಿಸಿ ನೀರು ತರುವುದಾಗಿ ಘೋಷಣೆ ಮಾಡಿದ್ದರು. ಆದರೆ ಅವರು ಮಾತು ಉಳಿಸಿಕೊಳ್ಳಲಿಲ್ಲ ಎಂದು ರೈತರು ಹಿಡಿಶಾಪ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com