

ಬೆಂಗಳೂರು: ತಾವರೆಕೆರೆಯಿಂದ ನೆಲಮಂಗಲಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ವೊಂದು ಅರ್ಕಾವತಿ ನದಿಗೆ ಉರುಳಿ ಬಿದ್ದಿದ್ದು, ಪರಿಣಾಮ ಬಸ್ ನಲ್ಲಿದ್ದ 40 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಇಂದು ಬೆಳಿಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸೇರಿದ ಬಸ್ ವೊಂದು ತಾವರೆಕೆರೆಯಿಂದ ನೆಲಮಂಗಲಕ್ಕೆ ಹೋಗುತ್ತಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರು ಬಳಿ ಬರುತ್ತಿದ್ದಂತೆ ಎದುರಿಗೆ ವಾಹನವೊಂದು ಬಂದಿದೆ. ಈ ವೇಳೆ ಆ ವಾಹನ ಡಿಕ್ಕಿ ತಪ್ಪಿಸಲು ಹೋಗಿ ಬಸ್ ರಸ್ತೆ ಬದಿಯಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಅರ್ಕಾವತಿ ನದಿಗೆ ಉರುಳಿ ಬಿದ್ದಿದೆ.
ಪರಿಣಾಮ ಬಸ್ ನಲ್ಲಿದ್ದ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಸೇರಿ 40 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನದಿಯಿಂದ ಬಸ್'ನ್ನು ಮೇಲೆತ್ತಲು ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಹಾಗೂ ಪೊಲೀಸರು ಹರಸಾಹಸಪಡುತ್ತಿದ್ದಾರೆ.
Advertisement