ಲೈಂಗಿಕ ದೌರ್ಜನ್ಯಕ್ಕೆ ಯುವತಿಯರ ಉಡುಗೆತೊಡುಗೆಯೇ ಕಾರಣ: ಮಾತೆ ಮಹಾದೇವಿ

ಹೊಸ ವರ್ಷದಂದು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಯುವತಿಯರ ಉಡುಗೆತೊಡುಗೆಯೇ ಕಾರಣ.
ಮಾತೆ ಮಹಾದೇವಿ
ಮಾತೆ ಮಹಾದೇವಿ
ಧಾರವಾಡ: ಹೊಸ ವರ್ಷದಂದು ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಯುವತಿಯರ ಉಡುಗೆತೊಡುಗೆಯೇ ಕಾರಣ. ರಾತ್ರಿ 12 ಗಂಟೆಯ ನಂತರ ಬೀದಿಯಲ್ಲಿ ಹೆಣ್ಣುಮಕ್ಕಳು ಕಾಮುಕರಿಗೆ ಪ್ರಚೋದನೆ ನೀಡುತ್ತ ಓಡಾಡುತ್ತಿರುವುದರಿಂದಲೇ ಅತ್ಯಾಚಾರಗಳು ಹೆಚ್ಚಾಗುತ್ತಿವ ಎಂದು ಮಾತೆ ಮಹಾದೇವಿ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಇಂದು ಧಾರವಾಡದಲ್ಲಿ ಡಿಸೆಂಬರ್ 31ರಂದು ಮಧ್ಯರಾತ್ರಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಮಾತೆ ಮಹಾದೇವಿ, ಹೆಣ್ಣುಮಕ್ಕಳು ಹೊಸ ವರ್ಷದ ಹೆಸರಿನಲ್ಲಿ ಈ ರೀತಿಯ ಸ್ವೇಚ್ಛಾಚಾರದ ವರ್ತನೆ ತೋರುವುದು ಅವಮಾನಕರ. ಇಂಥ ಪ್ರಕರಣಗಳು ನಿಲ್ಲಬೇಕಾದರೆ ಹೆಣ್ಣಮಕ್ಕಳು ಮೈ ತುಂಬಾ ಬಟ್ಟೆ ಧರಿಸಬೇಕು. ಈ ಸಂಬಂಧ ಸರ್ಕಾರ ವಸ್ತ್ರಸಂಹಿತೆ ಜಾರಿಗೆ ತರಬೇಕು. ಅತ್ಯಾಚಾರಗಳು ಹೆಚ್ಚಾಗುವಲ್ಲಿ ಅರ್ಧ ತಪ್ಪು ಹೆಣ್ಣು ಮಕ್ಕಳದು, ಇನ್ನರ್ಧ ತಪ್ಪು ಸಮಾಜದ್ದು ಎಂದರು.
ರಾತ್ರಿ 12ಗಂಟೆ ನಂತರ ಯುವತಿಯರಾಗಲಿ, ಮಹಿಳೆಯರಾಗಲಿ ಮನೆ ಬಿಟ್ಟು ಹೊರಗೆ ಹೋಗಬಾರದು. ಅಷ್ಟೇ ಅಲ್ಲ ನಮ್ಮ ಉಡುಗೆ, ತೊಡುಗೆ ಕೂಡಾ ಉದ್ರೀಕಿಸುವಂತಿರಬಾರದು. 
ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳೂ ಇದಕ್ಕೆಲ್ಲಾ ಕಾರಣ. ಇವುಗಳಿಗೆಲ್ಲ ಕಡಿವಾಣ ಹಾಕಬೇಕಿದೆ. ಅರಬ್ ದೇಶದಲ್ಲಿರುವಂಥ ಕಠಿಣ ಕಾನೂನು ಹಾಗೂ ಆ ದೇಶಗಳಲ್ಲಿರುವ ವಸ್ತ್ರಸಂಹಿತೆ ನಮ್ಮಲ್ಲಿಯೂ ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com