ಸಾಯಿಗೋಲ್ಡ್ ಪ್ಯಾಲೇಸ್ ನಲ್ಲಿ ಎರಡನೇ ಬಾರಿ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳಿಯರು

ಎರಡನೇ ಬಾರಿಗೆ ಆಭರಣ ಅಂಗಡಿಯಲ್ಲಿ ಕದಿಯಲು ಹೋಗಿ ಮೂವರು ಕಳ್ಳಿಯರು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎರಡನೇ ಬಾರಿಗೆ ಆಭರಣ ಅಂಗಡಿಯಲ್ಲಿ ಕದಿಯಲು ಹೋಗಿ ಮೂವರು ಕಳ್ಳಿಯರು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಸವನಗುಡಿಯ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆಯಲ್ಲಿ ಮೂರು ತಿಂಗಳ ಹಿಂದೆ ಚಿನ್ನದ ಓಲೆ ಹಾಗೂ ಉಂಗುರ ಕದ್ದು ಪರಾರಿಯಾಗಿದ್ದ ಮಹಿಳೆಯರ ಗ್ಯಾಂಗ್, ಭಾನುವಾರ ಮಧ್ಯಾಹ್ನ ಮತ್ತೆ ಅದೇ ಮಳಿಗೆಗೆ ಬಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
 
ಆಂಧ್ರ ಪ್ರದೇಶದ ಕುಪ್ಪಂ ಮೂಲದ ರತ್ನ, ಕಲಾ ಹಾಗೂ ಲತಾ ಎಂಬುವರನ್ನು ಬಂಧಿಸಲಾಗಿದೆ.

ಈ ಮೂವರು ಮಹಿಳೆಯರು ಹವ್ಯಾಸಿ ಕಳ್ಳಿಯರಾಗಿದ್ದಾರೆ. ಆಭರಣ ಅಂಗಡಿಗಳಿಗೆ ತೆರಳಿ ಗ್ರಾಹಕರ ಸೋಗಿನಲ್ಲಿ  ಸೇಲ್ಸ್ ಮ್ಯಾನ್ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನ.31 ರಂದು ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಹೋಗಿದ್ದ ಇವರು, ಉಂಗುರ–ಓಲೆಗಳನ್ನು ನೋಡಿಕೊಂಡು ಹೋಗಿದ್ದರು. ನಂತರ ಅದೇ ವಿನ್ಯಾಸದ ನಕಲಿ ಉಂಗುರ–ಓಲೆ ಮಾಡಿಸಿಕೊಂಡು ಎರಡು ದಿನಗಳಲ್ಲೇ ಪುನಃ ಮಳಿಗೆಗೆ ಬಂದಿದ್ದರು.

ನೌಕರನನ್ನು ಮಾತಿಗೆಳೆದು ಆತನ ಗಮನ ಬೇರೆಡೆ ಸೆಳೆದ ಅವರು, ಟ್ರೇನಲ್ಲಿದ್ದ ಉಂಗುರ–ಓಲೆಗಳನ್ನು ಎಗರಿಸಿದ್ದರು. ಪೂರ್ವನಿಯೋಜಿತ ಸಂಚಿನಂತೆ ಆ ಜಾಗದಲ್ಲಿ ತಾವು ತಂದಿದ್ದ ಅದೇ ವಿನ್ಯಾಸದ ನಕಲಿ ಆಭರಣ ಇಟ್ಟು ಹೋಗಿದ್ದರು.

ರಾತ್ರಿ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಅವರ ಕೃತ್ಯ ಬೆಳಕಿಗೆ ಬಂದಿತ್ತು. ಈ ಸಂಬಂಧ ಮಳಿಗೆ ವ್ಯವಸ್ಥಾಪಕ ಬಸವನಗುಡಿ ಠಾಣೆಗೆ ದೂರು ಕೊಟ್ಟಿದ್ದರು.

ಗುರುತಿಸಿದ ನೌಕರ: ಭಾನುವಾರ ಮಧ್ಯಾಹ್ನ ಮಳಿಗೆಗೆ ಬಂದ ಆ ಮಹಿಳೆಯರನ್ನು ಗುರುತಿಸಿದ ನೌಕರ, ವ್ಯವಸ್ಥಾಪಕರ ಮೂಲಕ ಬಸವನಗುಡಿ ಠಾಣೆಗೆ ಕರೆ ಮಾಡಿಸಿದ್ದ. ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಗ್ಯಾಂಗ್‌ನ ಲೀಡರ್ ಲಕ್ಷ್ಮಿ ಸದ್ಯ ಕುಪ್ಪಂ ಜೈಲಿನಲ್ಲಿದ್ದಾಳೆ. ಸಹಚರರ ಮೂಲಕ ಆಭರಣ ಮಳಿಗೆಗಳಲ್ಲಿ ಕಳವು ಮಾಡಿಸುತ್ತಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com