ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿದು ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.
ಇಂದು ಮಧ್ಯಾಹ್ನ ಮಾಲ್ ಹಿಂಬದಿ ಗೋಡೆ ಕುಸಿದು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ
ಗೋಡೆ ಕುಸಿತದ ಸುದ್ದಿಯಿಂದಾಗಿ ಮಾಲ್ ನಲ್ಲಿದ್ದ ಸಿಬ್ಬಂದಿಗಳು, ಜನರು ಆತಂಕಕ್ಕೀಡಾಗಿದ್ದು, ಕೆಲಕಾಲ ತೀವ್ರ ಆತಂಕ ಸೃಷ್ಟಿ ಮಾಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್ ನಿಂದ ಎಲ್ಲಾ ಜನರನ್ನು ತೆರವುಗೊಳಿಸಲಾಗಿದೆ ಮತ್ತು ಚಿತ್ರ ಪ್ರದರ್ಶನ ಸಹ ಸ್ಥಗಿತಗೊಳಿಸಲಾಗಿದೆ.
ನೀರು ಸರಬರಾಜು ಪೈಪ್ ತುಂಡಾಗಿ 1ರಿಂದ 3ನೇ ಮಹಡಿಯಲ್ಲಿ ನೀರು ತುಂಬಿಕೊಂಡಿತ್ತು. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ ಮತ್ತಷ್ಟು ಗೋಡೆ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದ್ದಾರೆ.