ಬೆಂಗಳೂರು: ಶೇ.31 ರಷ್ಟು ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶ ತೊಂದರೆ

ವಾಯುಮಾಲಿನ್ಯ ತಡೆದುಕೊಂಡು ಗಂಟೆಗಟ್ಟಲೆ ನಿಂತಲ್ಲಿಯೇ ನಿಲ್ಲುವ ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶದ ತೊಂದರೆ ಹೆಚ್ಚು ಕಾಡುತ್ತಿದೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ.
ಟ್ರಾಫಿಕ್ ಪೊಲೀಸ್
ಟ್ರಾಫಿಕ್ ಪೊಲೀಸ್
ಬೆಂಗಳೂರು: ಟ್ರಾಫಿಕ್ ಜಾಮ್ ಗೆ ಹೆಸರಾಗಿರುವ, 66.31 ಲಕ್ಷ ವಾಹನಗಳಿರುವ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿರ್ವಹಿಸುವುದು ಸವಾಲಿನ ಸಂಗತಿಯೇ ಸರಿ. ವಾಯುಮಾಲಿನ್ಯ ತಡೆದುಕೊಂಡು ಗಂಟೆಗಟ್ಟಲೆ ನಿಂತಲ್ಲಿಯೇ ನಿಲ್ಲುವ ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶದ ತೊಂದರೆ ಹೆಚ್ಚು ಕಾಡುತ್ತಿದೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ. 
ಸೇಂಟ್ ಜಾನ್ಸ್ ಆಸ್ಪತ್ರೆಯ ಶ್ವಾಸಕೋಶ ತಜ್ಞರು ಹಾಗೂ ವಾಯುಮಾಲಿನ್ಯ ವಿರೋಧಿ ಅಭಿಯಾನ ಕೈಗೊಂಡಿರುವ ಎನ್ ಜಿಒ ಜಂಟಿ ಅಧ್ಯಯನ ವರದಿಯಲ್ಲಿ ಶೇ.31 ರಷ್ಟು ಟ್ರಫಿಕ್ ಪೊಲೀಸರಿಗೆ ಶ್ವಾಸಕೋಶದ ತೊಂದರೆ ಇದ್ದು ಶೇ.20 ರಷ್ಟು ಜನರಿಗೆ ಉಸಿರಾಟದ ತೊಂದರೆ ಇದೆ ಎಂದು ತಿಳಿದುಬಂದಿದೆ. 
ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುವ ಆಸ್ತಮಾ, ಉಸಿರಾಟದ ತೊಂದರೆಗಳ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಡಾ.ಪ್ರಿಯಾ ಹೇಳಿದ್ದಾರೆ. ಟ್ರಾಫಿಕ್ ಹೆಚ್ಚಿರುವ ಪ್ರದೇಶಗಳಲ್ಲಿರುವ, ಸಂಚಾರ ದಟ್ಟಣೆ ನಿಯಂತ್ರಿಸುವ ಪೊಲೀಸರಲ್ಲಿ ಈ ರೀತಿಯ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದರೆ ಶ್ವಾಸಕೋಶದ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಹೆಚ್ಚು ತಿಳಿಯುವುದಕ್ಕಾಗಿ ಶೇ.80 ರಷ್ಟು ಟ್ರಾಫಿಕ್ ಪೊಲೀಸರನ್ನು ತಪಾಸಣೆ ಮಾಡಬೇಕಿದೆ ಎಂದು ಅಧ್ಯಯನ ನಡೆಸಿದ ತಂಡ ಅಭಿಪ್ರಾಯಪಟ್ಟಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತ ಹಿತೇಂದ್ರ ವಾರ್ಷಿಕವಾಗಿ ಒಮ್ಮೆಯಾದರೂ ವೈದ್ಯಕೀಯ ತಪಾಸಣೆ ನಡೆಸುತ್ತೇವೆ. ಕೆಲವು ವರ್ಷಗಳ ನಂತರ ಟ್ರಾಫಿಕ್ ವಿಭಾಗದಿಂದ ಬೇರೆಡೆಗೆ ವರ್ಗಾವಣೆಗೊಳ್ಳುವ ಅವಕಾಶವೂ ಇದೆ. ಅಷ್ಟೇ ಅಲ್ಲದೇ ಸಂಚಾರ ದಟ್ಟಣೆ ನಿರ್ವಹಿಸುವ ಪೊಲೀಸರಿಗೆ ಮಾಸ್ಕ್ ಗಳನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com