
ಮಂಗಳೂರು: ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಪಡಿತರ ಧಾನ್ಯ ವಿತರಣೆ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.
ಪ್ರತಿ ತಿಂಗಳು ವಿತರಿಸಲು ಹಾಗೂ ಫಲಾನುಭವಿಗಳು ರೇಷನ್ ಪಡೆದುಕೊಳ್ಳಲು ಹಲವು ತೊಡಕುಗಳು ಎದುರಾಗುತ್ತಿವೆ, ವಿಶೇಷವಾಗಿ ನಿಯಂತ್ರಿತ ಪ್ರದೇಶದಲ್ಲಿರುವ ಜನರು ಪಡಿತರ ಧಾನ್ಯ ಪಡೆದುಕೊಳ್ಳಲು ಪ್ರತಿ ತಿಂಗಳು ಹರಸಾಹಸ ಪಡಬೇಕಾಗಿದೆ. ಇದನ್ನು ತಪ್ಪಿಸಲು ಮೂರು ತಿಂಗಳಿಗೊಮ್ಮೆ ರೇಷನ್ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಪಡಿತರ ಧಾನ್ಯ ಖರೀದಿಸಲು ಬಡಜನರಿಗೆ ತಗಲುವ ಸಾಗಣೆ ವೆಚ್ಚ ಉಳಿತಾಯ ಮಾಡಲು ಮೂರು ತಿಂಗಳಿಗೊಮ್ಮೆ ರೇಷನ್ ವಿತರಿಸಲು ಚಿಂತನೆ ನಡೆಸುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಪ್ರಸ್ತಾವನೆಗೆ ಅನುಮೋದನೆ ದೊರೆತರೇ ಜನರಿಗೆ ಇದರಿಂದ ಬಹಳ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.
ಜನರಿಗೆ ಪೂರೈಸುತ್ತಿರುವ ಪಡಿತರದ ಜೊತೆ ಪ್ರೊಟೀನ್ ಆಹಾರವಾದ ಬೆಳೆಯನ್ನು ಕೂಡ ನೀಡಲಾಗುತ್ತದೆ. ಫೆಬ್ರವರಿ 1 ರಿಂದ 1 ಕೆಜಿ ಬೇಳೆಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement