ಮೈಸೂರು: ಸರ್ಕಾರಿ ಕಾಲೇಜು ಉಪನ್ಯಾಸಕಿಯರಿಗೂ ಬಂತು ಸಮವಸ್ತ್ರ ನೀತಿ!

ವಿದ್ಯಾರ್ಥಿಗಳಿಗಿದ್ದ ವಸ್ತ್ರ ಸಂಹಿತೆ ಇದೀಗ ಕಾಲೇಜು ಉಪನ್ಯಾಸಕಿಯರಿಗೂ ಅನ್ವಯವಾಗಲಿದ್ದು, ಸರ್ಕಾರಿ ಕಾಲೇಜಿನ ಉಪನ್ಯಾಸಕಿಯರು ಹಾಗೂ ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕಿಯರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ವಿದ್ಯಾರ್ಥಿಗಳಿಗಿದ್ದ ವಸ್ತ್ರ ಸಂಹಿತೆ ಇದೀಗ ಕಾಲೇಜು ಉಪನ್ಯಾಸಕಿಯರಿಗೂ ಅನ್ವಯವಾಗಲಿದ್ದು, ಸರ್ಕಾರಿ ಕಾಲೇಜಿನ ಉಪನ್ಯಾಸಕಿಯರು ಹಾಗೂ ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕಿಯರಿಗೆ  ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ಕಾಲೇಜು ಉಪನ್ಯಾಸಕಿಯರು ಇನ್ನು ಮುಂದೆ ತಮಗಿಷ್ಟವಾದ ಡ್ರೆಸ್​ ತೊಟ್ಟು ಕಾಲೇಜಿಗೆ ಬರುವಂತಿಲ್ಲ. ತರಗತಿಗಳಲ್ಲಿ ಮೊಬೈಲ್​ ಬಳಕೆ ಮಾಡುವಂತಿಲ್ಲ. ನೀಟಾಗಿ ಸೀರೆ ಉಟ್ಟು ಉಪನ್ಯಾಸ ಮಾಡಬೇಕು. ಇದು ಕಾಲೇಜುಗಳಲ್ಲಿ  ಉಪನ್ಯಾಸ ಮಾಡುವ ಉಪನ್ಯಾಸಕಿಯರಿಗೆ ಮೈಸೂರು ವಲಯದ ಉನ್ನತ ಶಿಕ್ಷಣ ಇಲಾಖೆ ವಿಧಿಸಿರುವ ನಿಯಮಗಳು. ಉಪನ್ಯಾಸಕಿಯರಿಗೆ ಡ್ರೆಸ್​ ಕೋಡ್ ಕಡ್ಡಾಯಗೊಳಿಸಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಕಾಲೇಜು  ಉಪನ್ಯಾಸಕಿಯರು ಸೀರೆ ಉಡುವಂತೆ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ಅಲ್ಲದೆ ತರಗತಿ ವೇಳೆ ಮೊಬೈಲ್ ಬಳಕೆಯನ್ನು ನಿಷೇಧ ಮಾಡಿದೆ.

ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಉಡುವಂತೆ 4 ತಿಂಗಳ ಹಿಂದೆ ಡ್ರೆಸ್​ ಕೋಡ್ ಬಗ್ಗೆ ಇಲಾಖೆ ನಿರ್ಧರಿಸಿತ್ತಾದರೂ, ಈ ಬಗ್ಗೆ ಹಲವು ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ಹಳೆ ಆದೇಶಕ್ಕೆ ಮತ್ತೆ ಜೀವ  ತಂದಿರುವ ಶಿಕ್ಷಣ ಇಲಾಖೆ, ಈ ಬಗ್ಗೆ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.  

ಕೋಲಾರ ಮೂಲದ ಆರ್‌. ಸತೀಶ್‌ ಕುಮಾರ್‌ ಎಂಬವರು ಜುಲೈ 2 2015 ರಂದು ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಎಲ್ಲ  ಸರ್ಕಾರಿ, ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು, ಶಿಕ್ಷಣ ಮಹಾವಿದ್ಯಾಲಯ, ಕಾನೂನು ಕಾಲೇಜುಗಳಿಗೆ ಅನ್ವಯವಾಗಲಿದೆ.

ಈ ಕುರಿತು ಕಾಲೇಜು ಶಿಕ್ಷಣ ಆಯುಕ್ತ ಡಾ. ಅಜಯ್ ನಾಗಭೂಷಣ್ ಅವರು ಮಾತನಾಡಿ, ತರಗತಿ ಸಂದರ್ಭದಲ್ಲಿ ಶಿಕ್ಷಕರು ಮೊಬೈಲ್ ಬಳಕೆ ಮಾಡಬಾರದು ಎಂಬ ನಿಯಮದ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ ಶಿಕ್ಷಕಿಯರ  ವಸ್ತ್ರ ಸಂಹಿತೆ ಕುರಿತಂತೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಇಲಾಖೆಯನ್ನು ಕೋರಿದ್ದೇವೆ ಎಂದು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com