
ಗದಗ: ಏಲಿಯನ್ ಗಳ ಇರುವಿಕೆ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ನಮ್ಮದೇ ಕರ್ನಾಟಕದಲ್ಲಿ ಏಲಿಯನ್ ಗಳು ಆಗಮಿಸಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಹೌದು.. ಕಳೆದ ಭಾನುವಾರ ರಾತ್ರಿ ಕರ್ನಾಟಕದ ಗದಗ ಜಿಲ್ಲೆಯ ಸಮೀಪದ ಅಂಟೂರು ಗ್ರಾಮದಲ್ಲಿ ಏಲಿಯನ್ ಗಳು ಆಗಮಿಸಿದ್ದವು ಎಂಬ ಸುದ್ದಿ ಹಾರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಗ್ರಾಮದ ಸಮೀಪದ ಗದ್ದೆಗಳಲ್ಲಿ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಈ ಹೆಜ್ಜೆ ಗುರುತುಗಳು ಏಲಿಯನ್ ಗಳದ್ದೇ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಕಳೆದ ಭಾನುವಾರ ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ವಿಚಿತ್ರ ಪ್ರಾಣಿಗಳು ದೊಡ್ಡ ಮಟ್ಟದ ಉಸಿರಾಟ ಮಾಡುತ್ತಾ ತಿರುಗಾಡುತ್ತಿತ್ತು. ಅವುಗಳ ಉಸಿರಾಟದ ಶಬ್ದಕ್ಕೇ ಹೆದರಿ ನಾವು ಮನೆಯಿಂದ ಆಚೆ ಬರಲಿಲ್ಲ ಎಂದು ಗ್ರಾಮದ ಹಲವು ಮಹಿಳೆಯರು ಹೇಳಿದ್ದಾರೆ. ಮಾರನೆ ದಿನ ಬೆಳಗ್ಗೆ ಅದೇ ಗ್ರಾಮದ ಸಮೀಪದ ಕೃಷಿ ಭೂಮಿಯಲ್ಲಿ ದೊಡ್ಡ ಪ್ರಮಾಣದ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಇದು ಏಲಿಯನ್ ನದ್ದೇ ಎಂದು ಶಂಕಿಸಲಾಗುತ್ತಿದೆ. ಅಂಟೂರು ಗ್ರಾಮದ ಕೂಗಳತೆ ದೂರದಲ್ಲಿರುವ ಬೂದಿಹಾಳ ಮಠದ ಸಮೀಪದ ಗದ್ದೆಯಲ್ಲಿ 20-30 ಹೆಜ್ಜೆ ಗುರುತುಗಳು ಕಂಡುಬಂದಿದೆ.
ಇನ್ನು ಏಲಿಯನ್ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಸ್ಥಳೀಯ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು, ಹೆಜ್ಜೆ ಗುರುತುಗಳಿರುವ ಹೊಲದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಅಚ್ಚರಿ ವ್ಯಕ್ತಪಡಿಸಿರುವ ಅಧಿಕಾರಿಗಳು ಸ್ಥಳದಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತುಗಳು ವಿಚಿತ್ರವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಸ್ಥಳೀಯರೇ ಯಾರೋ ಗ್ರಾಮದಲ್ಲಿ ಭಯಭೀತ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಇಂತಹ ಕೃತ್ಯ ಮಾಡಿರಬಹುದು ಎಂದು ಶಂಕಿಸಿದ್ದು, ರಾತ್ರಿ ವೇಳೆ ಗಸ್ತು ತಿರುಗಲು ನಿರ್ಧರಿಸಿದ್ದಾರೆ.
Advertisement