ಮಂಗಳೂರು: ಜು.30ರವರೆಗೆ ನಿಷೇಧಾಜ್ಞೆ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಕೋಮು ಗಲಭೆ, ಘರ್ಷಣೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ...
ಮಂಗಳೂರು ಸಮೀಪ ಕೈಕಂಬದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮಂಗಳೂರು ಸಮೀಪ ಕೈಕಂಬದಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಕೋಮು ಗಲಭೆ, ಘರ್ಷಣೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಈ ತಿಂಗಳ 30ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಪ್ರಕಾರ, ಸೆಕ್ಷನ್ 35ರಡಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಜುಲೈ 30ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಚೋದನೆಗೆ ಕಾರಣವಾಗುವ, ಸಾರ್ವಜನಿಕ ಆದೇಶಗಳ ಮೇಲೆ ಪರಿಣಾಮ ಬೀರುವ ಮತ್ತು ಭದ್ರತೆಗಳನ್ನು ದುರ್ಬಲಗೊಳಿಸುವ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ. ಸಮಾಜದ ಶಾಂತಿಯನ್ನು ಕೆಡಿಸುವ ಯಾವುದೇ ಅಹಿತಕರ ಘಟನೆಗಳು ಮುಂದಿನ ದಿನಗಳಲ್ಲಿ ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿಷೇಧಾಜ್ಞೆ ಜಾರಿ ಸಂದರ್ಭದಲ್ಲಿ ಕಲ್ಲುಗಳ ಸಂಗ್ರಹ, ವಸ್ತುಗಳನ್ನು ಎಸೆಯಲು ಬಳಸುವ ಸಾಧನಗಳು, ಸಾರ್ವಜನಿಕರ ಶವಗಳ ಪ್ರದರ್ಶನ, ಸಾರ್ವಜನಿಕ ದೌರ್ಜನ್ಯ, ಮತ್ತು ಸಭ್ಯತೆ ಮತ್ತು ರಾಜ್ಯದ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆರಂಭದಲ್ಲಿ ಎರಡು ಗುಂಪುಗಳ ಮಧ್ಯೆ ಜಗಳಗಳು ನಡೆದ ಬಂಟ್ವಾಳದಲ್ಲಿ ಮೇ 27ರಂದು ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಂತರ ಹಿಂಸಾಚಾರ ಹರಡಿದ್ದರಿಂದ ನಿಷೇಧಾಜ್ಞೆಯನ್ನು ನಾಲ್ಕು ತಾಲ್ಲೂಕುಗಳಿಗೆ ವಿಸ್ತರಿಸಲಾಯಿತು.
ಕಳೆದ ತಿಂಗಳು 21ರಂದು ಮಂಗಳೂರು ಸಮೀಪ ಬೆಂಜನಪದವು ಎಂಬಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರೊಬ್ಬರ ಕೊಲೆಯ ನಂತರ ಉದ್ವಿಗ್ನ ವಾತಾವರಣ ಉಂಟಾಗಿದ್ದು ನಿಷೇಧಾಜ್ಞೆ ಆದೇಶವನ್ನು ಅಧಿಕಾರಿಗಳು ವಿಸ್ತರಿಸುವಂತಾಯಿತು.
ಮತ್ತೊಂದು ಪ್ರಕರಣದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳನನ್ನು ಅಪರಿಚಿತ ದುಷ್ಕರ್ಮಿಗಳು ಜುಲೈ 4ರಂದು ಹಲ್ಲೆ ಮಾಡಿ ಹತ್ಯೆಗೈದಿದ್ದರು.ತೀವ್ರ ಗಾಯದಿಂದ ಶರತ್ ಮಡಿವಾಳ ಮೊನ್ನೆ 7ರಂದು ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com