ಸಂಗ್ರಹ ಚಿತ್ರ
ರಾಜ್ಯ
ಪ್ರತ್ಯೇಕ ಬಾವುಟ ಯೋಜನೆಯನ್ನು ಸದ್ದಿಲ್ಲದೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ?
ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ರೂಪಿಸಿ ಅದಕ್ಕೊಂದು ಕಾನೂನು ಚೌಕಟ್ಟು ಕಲ್ಪಿಸಲು 9 ಸದಸ್ಯರ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಪಕ್ಷದ ಹೈ ಕಮಾಂಡ್ ನಿಂದಲೇ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರತ್ಯೇಕ ಬಾವುಟ ಯೋಜನೆಯನ್ನು...
ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ರೂಪಿಸಿ ಅದಕ್ಕೊಂದು ಕಾನೂನು ಚೌಕಟ್ಟು ಕಲ್ಪಿಸಲು 9 ಸದಸ್ಯರ ಸಮಿತಿ ರಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಪಕ್ಷದ ಹೈ ಕಮಾಂಡ್ ನಿಂದಲೇ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರತ್ಯೇಕ ಬಾವುಟ ಯೋಜನೆಯನ್ನು ಸದ್ದಿಲ್ಲದೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಪ್ರತ್ಯೇಕ ಧ್ವಜ ವಿವಾದ ಕುರಿತಂತೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಈ ಬಗೆಗಿನ ಕೆಲ ಸುಳಿವು ನೀಡಿದ್ದಾರೆ.
ರಾಜ್ಯ ಮುಖ್ಯವಾಹಿನಿಗೆ ಬರಬೇಕಿದೆ. ಪ್ರತ್ಯೇಕ ಧ್ವಜ ವಿಚಾರದಲ್ಲಿ ವಿವಾದವೆಂಬ ಪ್ರಶ್ನೆಯೇ ಹುಟ್ಟುವುದಿಲ್ಲ. ಕಾನೂನಾತ್ಮಕವಾಗಿ ಕರ್ನಾಟಕ ಪ್ರತ್ಯೇದ ಬಾವುಟ ಹೊಂದುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತನ್ನದೇ ಸ್ವಂತ ಧ್ವಜ ಹೊಂದಲು ಯಾವುದೇ ಕಾನೂನಿನ ತೊಡಕಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಧ್ವಜದ ಬಗ್ಗೆ ಸರ್ಕಾರ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕಾನೂನು ತಜ್ಞರ ಅಭಿಮತ ಹಾಗೂ ಇತರೆ ಕಾನೂನಾತ್ಮಕ ನಿರ್ದೇಶನಗಳನ್ನು ಪರಿಗಣನೆಗೆ ತೆಗೆದುಕೊಂಡು ನಂತರ ವಷ್ಟೇ ಮುಂದಿನ ಹೆಜ್ಜೆಯನ್ನು ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಿದ್ದ ಸಚಿವ ಸಂಪುಟ ಸಭೆ ಬಳಿಕ ಅನೌಪಚಾರಿಕವಾಗಿ ನಡೆದ ಮಾತುಕತೆ ವೇಳೆ ಪ್ರತ್ಯೇಕ ಧ್ವಜ ವಿಷಯ ಪ್ರಸ್ತಾಪಿಸಿದ್ದ ಕೆಲವು ಸಚಿವರು, ಕನ್ನಡ ಧ್ವಜದ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆತುರದ ಕ್ರಮ ಕೈಗೊಂಡಿದೆ ಈ ರೀತಿಯ ಸೂಕ್ಷ್ಮ ವಿಚಾರಗಳಲ್ಲಿ ಸಾಧಕ ಬಾಧಕಗಳನ್ನು ಯೋಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಪ್ರತ್ಯೇಕ ಧ್ವಜ ವಿವಾದ ಸಂಬಂಧ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರಗಳು ಕೂಡ ಮುಂದಿವರೆದಿದೆ.
ಪ್ರತ್ಯೇಕ ಧ್ವಜ ವಿವಾದ ಇದೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಹಲವೆಡೆ ರಾಜ್ಯ ಸರ್ಕಾರದ ಈ ನಡೆಗೆ ವಿರೋಧಗಳು ವ್ಯಕ್ತವಾಗುತ್ತಿವೆ. ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಗೋ ಹತ್ಯೆ ನಿಷೇಧ ವಿರೋಧಿಸಿ ಹಾಗೂ ಒಡಕು ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಧ್ಯೆಯೇ ಕರ್ನಾಟಕದ ಪ್ರತ್ಯೇಕ ಧ್ವಜ ವಿಚಾರ ಇದೀಗ ಹೈಕಮಾಂಡ್ ತಲೆ ಬಿಸಿಯಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ರಾಜ್ಯ ಸರ್ಕಾರವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ