ಬೆಂಗಳೂರು: ಮೊಬೈಲ್ ಆಪ್ ಅಭಿವೃದ್ಧಿಪಡಿಸುವುದಕ್ಕೆ ಬೇಕಾದ ಹಣ ಹೊಂದಿಸುವುದಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎಚ್ಎಸ್ ಆರ್ ಲೇಔಟ್ ನಿವಾಸಿ ಜಬಿವುದ್ದೀನ್ ತಬ್ರೆಜ್(30) ಹಾಗೂ ಮಹಾಲಕ್ಷ್ಮೀ ಲೇಔಟ್ ನಿವಾಸಿ ಅರುಣ್ ಕುಮಾರ್(30) ಎಂದು ಗುರುತಿಸಲಾಗಿದೆ.
ಈ ಇಬ್ಬರು ಆರೋಪಿಗಳು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜೈಲಿನಲ್ಲಿಯೇ ಇಬ್ಬರ ಪರಿಚಯವಾಗಿದೆ. ಜೈಲಿನಲ್ಲಿರುವಾಗಲೇ ನಗರದ ಶಾಲಾ-ಕಾಲೇಜುಗಳ ಪರಿಚಯವಿರುವ ಮೊಬೈಲ್ ಆಪ್ ವೊಂದನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಆಪ್ ಅಭಿವೃದ್ಧಿಪಡಿಸುವ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆಪ್ ಅಭಿವೃದ್ಧಿಪಡಿಸಲು 2 ಲಕ್ಷ ರುಪಾಯಿ ವೆಚ್ಚವಾಗುತ್ತದೆ ಎಂದು ಅವರು ಹೇಳಿದ್ದರಿಂದ ಅದಕ್ಕೆ ಹಣ ಹೊಂದಿಸಲು ಸರಗಳ್ಳತನಕ್ಕಿಳಿದದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ಕಳೆದ ಮಾರ್ಚ್ ನಿಂದ ಜೂನ್ 2017ರವರೆಗೆ ನಗರದ 17 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 29 ಚಿನ್ನದ ಸರಗಳನ್ನು ಕದ್ದಿದ್ದಾರೆ. ಈ ಇಬ್ಬರಿಗೂ ಕ್ರಿಮಿನಲ್ ಹಿನ್ನಲೆ ಇದ್ದು, 49 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.