ಕಾರಾಗೃಹದಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡುತ್ತಿರುವುದು ನಿಜ: ಸತ್ಯ ಒಪ್ಪಿಕೊಂಡ ಅಧಿಕಾರಿಗಳು

ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ ನಿಯಮಗಳನ್ನು ಉಲ್ಲಂಘಿಸಿ ರಾಜಾತಿಥ್ಯ ನೀಡುತ್ತಿರುವುದು ನಿಜ ಎಂದು ಬಂಧೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು...
ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್
ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್
Updated on
ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ ನಿಯಮಗಳನ್ನು ಉಲ್ಲಂಘಿಸಿ ರಾಜಾತಿಥ್ಯ ನೀಡುತ್ತಿರುವುದು ನಿಜ ಎಂದು ಬಂಧೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆಂದೂ ಮೂಲಗಳಿಂದ ತಿಳಿದುಬಂದಿದೆ. 
ಜೈಲಿನಲ್ಲಿ ಶಶಿಕಲಾ ಅವರಿಗೆ 5 ಐಷಾರಾಮಿ ಕೊಠಡಿ ನೀಡಿರುವುದು ಹಾಗೂ ಅಲ್ಲಿನ ನಿಯಮಗಳನ್ನು ಮೀರಿ ಹಲವಾರು ಸೌಲಭ್ಯಗಳನ್ನು ಕಲ್ಸಿರುವುದನ್ನು ಸ್ವತಃ ಕಾರಾಗೃಹದ ಹಿರಿಯ ಅಧಿಕಾರಿಗಳೇ ಇದೀಗ ಒಪ್ಪಿಕೊಂಡಿದ್ದಾರೆ. 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಸ್ವೇಚ್ಛಾಚಾರ ಮತ್ತು ವಿವಿಧ ಅಕ್ರಮಗಳಿಗೆ ಸಂಬಂಧಿಸಿದಂತೆ ಡಿಐಜಿ ರೂಪಾ ಅವರು ನೀಡಿದ್ದ ವರದಿಯ ಬಹುತೇಕ ಅಂಶಗಳನ್ನು ರಾಜ್ಯ ಬಂದೀಖಾನೆ ಇಲಾಖೆಯ ನೂತನ ಎಡಿಜಿಪಿ ಎನ್.ಎಸ್ ಮೇಘರಿಕ್ ಮತ್ತು ಡಿಐಜಿ ರೇವಣ್ಣ ಅವರು ಒಪ್ಪಿಕೊಂಡಿದ್ದಾರೆಂಬ ಮಾಹಿತಿ ಇದೀಗ ಹೊರಬಿದ್ದಿದೆ. ಅಲ್ಲದೆ, ಮಂಗಳೂರು ಜೈಲಿನಲ್ಲಿ ಹಲವು ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡು ಪಾರ್ಟಿ ನಡೆಸಿರುವುದನ್ನೂ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
ಮಾಜಿ ಗೃಹ ಸಚಿವರೂ ಆಗಿರುವ ಶಾಸಕ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ವಿಧಾನಮಂಡಲದ ಸಾರ್ವಜನಿಕರ ಲೆಕ್ಕಪತ್ರ ಸಮಿತಿ ಕಳೆದ ಶುಕ್ರವಾರ ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಅಕ್ರಮಗಳು ನಡೆದಿರುವುದು ನಿಜ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. ಮುಂದಿನ 15 ದಿನಗಳಲ್ಲಿ ಈ ಅಕ್ರಮಗಳನ್ನು ತಡೆಗಟ್ಟುವ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ವರದಿ ಸಲ್ಲಿಸುವ ಅಶೋಕ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. 
ಕೇಂದ್ರ ಕಾರಾಗೃಹಗಳಲ್ಲಿ ಹತ್ತು ವರ್ಷಗಳಿಂದ ನಡೆಯುತ್ತಿರುವ ಅಕ್ರಮಗಳು, ಅದರ ಪ್ರಸ್ತಾಪಗಳು ಸಿಎಜಿ ವರದಿಯಲ್ಲಿ (ಮಹಾಲೆಕ್ಕಪರಿಶೋಧಕರ ವರದಿ) ದಾಖಲಾಗಿದ್ದು ಮತ್ತು ಡಿಐಜಿ ರೂಪಾ ಅವರು ಇದೇ ವಿಚಾರಗಳನ್ನು ತಮ್ಮ ವರದಿಯಲ್ಲಿ ಹೇಳಿದ್ದರಿಂದ ಸಮಿತಿ ಸದಸ್ಯರು ಅಧಿಕಾರಿಗಳನ್ನು ಕರೆಸಿ ಪ್ರಶ್ನಿಸಿದ್ದರು. 
ಈ ವೇಳೆ ಬಂಧೀಖಾನೆಯ ಈ ಹಿರಿಯ ಇಬ್ಬರೂ ಅಧಿಕಾರಿಗಳು, ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡಿರುವುದು, ಇಚ್ಛಿಸಿದವರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ಸತ್ಯ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 
2004-05ರ ಸಿಎಜಿ ವರದಿಯಲ್ಲೇ ಜೈಲು ಅಕ್ರಮಗಳ ಬಗ್ಗೆ ಪ್ರಸ್ತಾಪವಾಗಿತ್ತು. ಇದರ ನಂತರದ ಸರ್ಕಾರದಲ್ಲಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿತ್ತು. ಆದರೂ ಸರ್ಕಾರ ಯಾವುದೇ ಸುಧಾರಣಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ 2014-15ರ ಸಿಎಜಿ ವರದಿಯಲ್ಲೂ ಇದೇ ಅಕ್ರಮಗಳ ಪ್ರಸ್ತಾಪವಾಗಿತ್ತು. 
ಇದರಲ್ಲಿ ಮೊಬೈಲ್ ಗಳ ಬಳಕೆ, ಕೈದಿಗಳ ಸಂಬಂಧಿಕರ ಹೆಸರಿನಲ್ಲಿ ಯಾರೋ ಬಂದು ಹೋಗುವುದು, ವಾಹನಗಳ ಪ್ರವೇಶಗಳಲ್ಲಿ ಲೆಕ್ಕವಿಲ್ಲದಿರುವುದು, ಕೈದಿಗಳಿಗೆ ಇಚ್ಛಿಸಿದ ಸೆಲ್ ಗಳನ್ನು ಹಂಚಿಕೆ ಮಾಡುವುದು, ಕಾಮಗಾರಿಗಳಲ್ಲಿ ಅಕ್ರಮ ನಡೆಸಿರುವುದು ವರದಿಯಲ್ಲಿತ್ತು. ಅದನ್ನು ಡಿಐಜಿ ರೂಪಾ ಕೂಡ ತಮ್ಮ ವರದಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ಅದರಲ್ಲಿ ಶಶಿಕಲಾ, ತೆಲಗಿ ಹಾಗೂ ಇತರ ಕೈದಿಗಳ ಅಕ್ರಮ ಮತ್ತು ಇಚ್ಚೀಚಿನ ಕೆಲವು ಭ್ರಷ್ಟಾಚಾರಗಳ ಬಗ್ಗೆಯೂ ವಿವರಿಸಿದ್ದರು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com