ಪತಿಯ ದೇಹ ತನ್ನಿ, ನಂತರ ಹಣ ಪಡೆದುಕೊಳ್ಳಿ: ಕೊಚ್ಚಿ ಹೋದ ಶಾಂತಕುಮಾರ್ ಪತ್ನಿಗೆ ಅಧಿಕಾರಿಗಳ ಉತ್ತರ

ಕಳೆದ ತಿಂಗಳು 20ರಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಕುರುಬರಹಳ್ಳಿಯಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ...
ಬೆಂಗಳೂರಿನ ಪೀಣ್ಯದಲ್ಲಿರುವ ತಮ್ಮ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಸರಸ್ವತಿ. ಅವರ ಪ್ರೀತಿಯ ನಾಯಿಯೂ ಜೊತೆಗಿದೆ.
ಬೆಂಗಳೂರಿನ ಪೀಣ್ಯದಲ್ಲಿರುವ ತಮ್ಮ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಸರಸ್ವತಿ. ಅವರ ಪ್ರೀತಿಯ ನಾಯಿಯೂ ಜೊತೆಗಿದೆ.
ಬೆಂಗಳೂರು:  ಕಳೆದ ತಿಂಗಳು 20ರಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಕುರುಬರಹಳ್ಳಿಯಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ 34 ವರ್ಷದ ಜೆಸಿಬಿ ನಿರ್ವಾಹಕ ಶಾಂತ ಕುಮಾರ್ ಕೊಚ್ಚಿಹೋದ ದುರ್ಘಟನೆಯಿಂದ ಅವರ ಪತ್ನಿ ಸರಸ್ವತಿ ಇನ್ನೂ ಹೊರಬಂದಿಲ್ಲ. ಶಾಂತಕುಮಾರ್ ನ ಮೃತದೇಹ ಇನ್ನೂ ಸಿಕ್ಕಿಲ್ಲ.
ಇಬ್ಬರು ಪುಟ್ಟ ಗಂಡು ಮಕ್ಕಳ ತಾಯಿ 24 ವರ್ಷದ ಸರಸ್ವತಿ ತನ್ನ ಗಂಡನನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಂಗೆಟ್ಟು ಹೋಗಿದ್ದಾರೆ.
ಸರಸ್ವತಿಗೆ ಪರಿಹಾರ ನೀಡಬೇಕಾದ ಬಿಬಿಎಂಪಿ ಅಧಿಕಾರಿಗಳು ಇದೀಗ ಷರತ್ತೊಂದನ್ನು ಮುಂದಿಟ್ಟಿದ್ದಾರೆ, ಅದೆಂದರೆ ಶಾಂತ ಕುಮಾರ್ ನ ಮೃತದೇಹವನ್ನು ಸಾಕ್ಷಿಯಾಗಿ ಮುಂದಿಟ್ಟು ನಂತರ ಹಣಕ್ಕೆ ಬೇಡಿಕೆಯಿಡಿ ಎಂದು ಹೇಳುತ್ತಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮತ್ತು ಮೇಯರ್ ಜಿ.ಪದ್ಮಾವತಿ ಶಾಂತಕುಮಾರ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಆದರೆ ಅದರಲ್ಲಿ ಒಂದು ರೂಪಾಯಿ ಕೂಡ ಸರಸ್ವತಿ ಕೈಗೆ ಸಿಕ್ಕಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಬಿ ಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಶಾಂತಕುಮಾರ್ ನ ಮೃತದೇಹವನ್ನು ಮೊದಲು ತೋರಿಸಿ ನಂತರ ಪರಿಹಾರ ಕೇಳಿ ಎಂದ ಅಧಿಕಾರಿಗಳ ಹೆಸರು ಹೇಳಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವ್ಯಕ್ತಿಯ ಮೃತದೇಹ ಸಿಗದಿದ್ದರೆ ಕಾನೂನು ಪ್ರಕಾರ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲು ಏಳು ವರ್ಷ ಬೇಕಾಗುತ್ತದೆ. ಆದರೆ ಮಾನವೀಯ ದೃಷ್ಟಿಯಿಂದ ಆದಷ್ಟು ಶೀಘ್ರವೇ ಸರಸ್ವತಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸರಸ್ವತಿ ಬಳಿ ಕೂಡ ಸದ್ಯ ಯಾವುದೇ ಉದ್ಯೋಗವಿಲ್ಲ. 3 ವರ್ಷ ಹಾಗೂ ಇನ್ನೊಂದು 9 ತಿಂಗಳ ಮಗುವಿನೊಂದಿಗೆ ಮುಂದೆ ಊಟಕ್ಕೆ ಏನು ಎಂದು ಚಿಂತಿಸುವ ಪರಿಸ್ಥಿತಿ.
ಮೇ 20ರಂದು ತಮ್ಮ ಪತಿ ನೀರಿನಲ್ಲಿ ಕೊಚ್ಚಿ ಹೋಗಿ ನಾಲ್ಕು ದಿನ ಬಿಬಿಎಂಪಿ ಸಿಬ್ಬಂದಿ ಹುಡುಕಾಟ ನಡೆಸಿದರು. ನಂತರ ನಿಲ್ಲಿಸಿದರು. ತಮ್ಮ ಸಂಬಂಧಿಕರು ಕೂಡ ಒಂದು ವಾರದವರೆಗೆ ಹುಡುಕಿದರು. ಏನೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ತಮ್ಮ ಮಕ್ಕಳು ನಿತ್ಯವೂ ತಂದೆಯನ್ನು ನೆನೆದು ಹಠ ಹಿಡಿಯುತ್ತಾರೆ ಎಂದು ಸರಸ್ವತಿ ಕಣ್ಣೀರಿಡುತ್ತಾರೆ.
ಸರಸ್ವತಿಯ ಪತಿ ಶಾಂತಕುಮಾರ್ ಬಿಬಿಎಂಪಿ ಗುತ್ತಿಗೆ ನೌಕರನಾಗಿದ್ದು ಕುರುಬರಹಳ್ಳಿಯಲ್ಲಿ ಚರಂಡಿ ದುರಸ್ತಿ ಮಾಡುತ್ತಿದ್ದ ವೇಳೆ ಪ್ರವಾಹ ಬಂದು ಕೊಚ್ಚಿ ಹೋಗಿದ್ದರು.
ಸರಸ್ವತಿ ಸೋದರ ಬಸವರಾಜು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಕಳೆದ 10 ದಿನಗಳಿಂದ ಪರಿಹಾರಕ್ಕಾಗಿ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆಯುತ್ತಿದ್ದೇನೆ. ಆರಂಭದಲ್ಲಿ ಸಂಬಂಧಿಸಿದ ದಾಖಲೆಗಳು ಕಮಿಷನರ್ ಬಳಿಗೆ ಹೋಯಿತು. ಅವರು ಅದನ್ನು ವಿಶೇಷ ಆಯುಕ್ತರ ಬಳಿ ಕಳುಹಿಸಿದರು. ಅವರು ಮೇಯರ್ ಬಳಿ ಕಳುಹಿಸಿದರು. ದಾಖಲೆಗಳನ್ನು ವಿಶೇಷ ಆಯುಕ್ತರ ಬಳಿಗೆ ಹಿಂತಿರುಗಿಸಲಾಯಿತು. ಅವರು ಅದಕ್ಕೆ ಅನುಮೋದನೆ ಹಾಕಿ ಮೇಯರ್ ಗೆ ಕಳುಹಿಸಿದರು. ಆದರೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. 
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಜಿ.ಪದ್ಮಾವತಿ, ಹಣದ ಹಂಚಿಕೆಗೆ ಪರಿಷತ್ತಿನಲ್ಲಿ ಅನುಮೋದನೆಯಾಗಬೇಕು. ಸರ್ಕಾರ ಒಂದು ಲಕ್ಷ ನೀಡಲಿದ್ದು ಮೇಯರ್ ನಿಧಿಯಿಂದ 9 ಲಕ್ಷ ನೀಡಲಾಗುವುದು. ವಿಶೇಷ ಆಯುಕ್ತರು ದಾಖಲೆಗಳಿಗೆ ಸಹಿ ಹಾಕಿದ್ದರೂ ಕೂಡ ಪರಿಷತ್ತಿನ ಸಭೆಯಲ್ಲಿ ಅನುಮೋದನೆಯಾಗಬೇಕು. ಇನ್ನೊಂದು ವಾರದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಚೆಕ್ ವಿತರಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com