ಭಟ್ಕಳದ ಮೊಹಮ್ಮದ್ ಶಫಿ ಅರ್ಮಾರ್
ಭಟ್ಕಳದ ಮೊಹಮ್ಮದ್ ಶಫಿ ಅರ್ಮಾರ್

ತಪ್ಪು ಮಾಡಿರುವುದೇ ಆದರೆ ಕಾನೂನು ಕ್ರಮ ಕೈಗೊಳ್ಳಲಿ: ಅರ್ಮಾರ್ ಕುಟುಂಬಸ್ಥರು

ತಪ್ಪು ಮಾಡಿರುವುದೇ ಆದರೆ, ಕಾನೂನು ಕ್ರಮ ಕೈಗೊಳ್ಳಲಿ. ಮನೆ ತೊರೆದು ದಶಕವಾಗಿದ್ದರೂ ಶಫಿ ನಮ್ಮೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ಜಾಗತಿಕ ಭಯೋತ್ಪಾದಕ ಪಟ್ಟ ಹೊತ್ತಿರುವ ಭಟ್ಕಳದ ಮೊಹಮ್ಮದ್ ಶಫಿ ಅರ್ಮಾರ್'ನ ಕುಟುಂಬಸ್ಥರು...
Published on
ಕಾರವಾರ: ತಪ್ಪು ಮಾಡಿರುವುದೇ ಆದರೆ, ಕಾನೂನು ಕ್ರಮ ಕೈಗೊಳ್ಳಲಿ. ಮನೆ ತೊರೆದು ದಶಕವಾಗಿದ್ದರೂ ಶಫಿ ನಮ್ಮೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ಜಾಗತಿಕ ಭಯೋತ್ಪಾದಕ ಪಟ್ಟ ಹೊತ್ತಿರುವ ಭಟ್ಕಳದ ಮೊಹಮ್ಮದ್ ಶಫಿ ಅರ್ಮಾರ್'ನ ಕುಟುಂಬಸ್ಥರು ಹೇಳಿದ್ದಾರೆ. 
ಸಿರಿಯಾ ಯುದ್ಧದ ಸಂದರ್ಭದಲ್ಲಿ ಶಫಿ ಮತ್ತು ಸುಲ್ತಾನ್ ಅರ್ಮಾರ್ ಡ್ರೋಣ್ ದಾಳಿಯಲ್ಲಿ ಮೃತಪಟ್ಟರು ಎಂಬ ಸುದ್ದಿಗಳು ಹರಿದಾಡಿತ್ತು. ಇದೀಗ ಅಂತರರಾಷ್ಟ್ರೀಯ ಉಗ್ರರ ಪಟ್ಟಿಯಲ್ಲಿ ಅರ್ಮಾರ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. 
2013ರಲ್ಲಿ ಬಂಧಿತನಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಯಾಸೀನ್ ಭಟ್ಕಳ ತನಿಖೆ ವೇಳೆ ಶಫಿ ಅರ್ಮಾರ್ ಬಗ್ಗೆ ಮಾಹಿತಿ ನೀಡಿದ್ದ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ ಸಹೋದರರೊಂದಿಗೆ ಶಫಿ ಸಕ್ರಿಯನಾಗಿದ್ದ, ಯಾಸಿನ್ ಬಂಧನದ ಬಳಿಕ ಕೆಲ ಮನಃಸ್ತಾಪಗಳು ಉಂಟಾದ ಹಿನ್ನಲೆಯಲ್ಲಿ ಸುಲ್ತಾನ್ ತನ್ನ ಸಹೋದರ ಮೊಹಮ್ಮದ್ ಶಫಿ ಜೊತೆಗೆ ಸಿರಿಯಾಗೆ ತೆರಳಿ ಇಸಿಸ್ ಗೆ ಸೇರ್ಪಡೆಗೊಂಡಿದ್ದ. 
ಸಹೋದರರಿಬ್ಬರೂ ಭಟ್ಕಳದಲ್ಲಿಯೇ ಬೆಳೆದಿದ್ದರು. 10ನೇ ತರಗತಿ ಬಳಿಕ ಸುಲ್ತಾನ್ ನಂತೆಯೇ ಶಫಿಯನ್ನೂ ಲಖನೌನಲ್ಲಿರುವ ನಡ್ವಾತ್-ಉಲ್-ಉಲ್ಲೆಮಾ ಸೆಮಿನರಿಗೆ ಸೇರ್ಪಡೆಗೊಳಿಸಲಾಗಿತ್ತು. ನಂತರ ಸಹೋದರರಿಬ್ಬರೂ 2008ರಲ್ಲಿ ಕರಾಚಿಗೆ ತೆರಳಿದ್ದರು. ಇದಾದ ಬಳಿಕ ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯರೆಂದು ಇಬ್ಬರನ್ನು ಬಂಧನಕ್ಕೊಳಪಡಿಸಿದ್ದರು. ನಂತರ ಇಸಿಸ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದ ಶಫಿ, ಅಂಜಾನ್ ಭಾಯ್ ಎಂದೇ ಹೆಸರು ಮಾಡಿದ್ದ. ಇದೀಗ ಶಫಿ ಅರ್ಮಾರ್ ನನ್ನು ಅಮೆರಿಕ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸಿದೆ. 
ಶಫಿಯ ಈ ನಡವಳಿಕೆಗಳಿಂದಾಗಿ ಬೇಸತ್ತಿದ್ದ ಕುಟುಂಬಸ್ಥರು ಆತನ ಮೇಲಿದ್ದ ಭರವಸೆಗಳನ್ನು ಕೈಬಿಟ್ಟಿದ್ದರು. ಮೂರು ವರ್ಷದ ಹಿಂದಷ್ಟೇ ಶಫಿ ತಂದೆ ಮೃತಪಟ್ಟಿದ್ದಾರೆ. ಇನ್ನು ತಾಯಿಗೆ ವಯಸ್ಸಾಗಿದ್ದು, ಶಫಿ ಸಹೋದರ ಭಟ್ಕಳದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನನ ನಡೆಸುತ್ತಿದ್ದಾನೆ.
ಶಫಿ ಕಿರಿಯ ಸಹೋದರ ಸಫ್ವಾನ್ ಅರ್ಮಾರ್ ಪ್ರತಿಕ್ರಿಯೆ ನೀಡಿದ್ದು, 2006ರಲ್ಲಿ ಶಫಿ ದುಬೈಗೆ ತೆರಳಿದ್ದ. ದುಬೈಗೆ ತೆರಳಿದ 2 ವರ್ಷಗಳವರೆಗೂ ನಮ್ಮೊಂದಿಗೆ ಫೋನ್ ನಲ್ಲಿ ಸಂಪರ್ಕವನ್ನು ಹೊಂದಿದ್ದ. ಇದಾದ ಬಳಿಕ ಆತ ನಮ್ಮನ್ನು ಸಂಪರ್ಕಿಸಿರಲಿಲ್ಲ. 10 ವರ್ಷಗಳಿಂದ ಆತನ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com